ಹರಿಯಾಣದ ಸೂರಜ್ ಕುಂಡ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಗೃಹ ಸಚಿವರ ಸಭೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹರಿಯಾಣ ಗೃಹ ಸಚಿವರಿಗೆ ವೇದಿಕೆಯಲ್ಲಿಯೇ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮಿತ್ ಶಾ ಅವರು ಇಂದು ಕೇಂದ್ರ ಗೃಹ ಸಚಿವಾಲಯದಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಗಾರಕ್ಕೆ ಚಾಲನೆ ನೀಡಿದ್ದು, ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರಿಗೆ ಸ್ವಾಗತ ಭಾಷಣ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಇದಕ್ಕಾಗಿ ಐದು ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿತ್ತು.
ಆದರೆ ಸ್ವಾಗತ ಭಾಷಣದ ಜೊತೆ ಜೊತೆಗೆ ಅವರು ಹರಿಯಾಣ ರಾಜ್ಯದ ಇತಿಹಾಸ, ಒಲಂಪಿಕ್ಸ್ ನಲ್ಲಿನ ಸಾಧನೆ, ರಾಜ್ಯ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡತೊಡಗಿದ್ದಾರೆ. ಈ ಸಂದರ್ಭದಲ್ಲಿ ಅಮಿತ್ ಶಾ ಭಾಷಣವನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಅನಿಲ್ ವಿಜ್ ಮುಂದುವರೆಸಿದ್ದಾರೆ.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅಮಿತ್ ಶಾ, ನೀವು ಈಗಾಗಲೇ ಎಂಟೂವರೆ ನಿಮಿಷಗಳ ಕಾಲ ಮಾತನಾಡಿದ್ದೀರಿ. ದೀರ್ಘ ಭಾಷಣ ಮಾಡಲು ಇದು ವೇದಿಕೆಯಲ್ಲ. ಕೂಡಲೇ ನಿಲ್ಲಿಸಿ ಎಂದಾಗ ಅನಿಲ್ ವಿಜ್ ಇನ್ನೊಂದು ಅಂಶವನ್ನು ಪ್ರಸ್ತಾಪಿಸಲು ಅವಕಾಶ ಕೊಡಿ ಎಂದಿದ್ದಾರೆ.
ಅದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಮತ್ತೆ ದೀರ್ಘ ಭಾಷಣ ಆರಂಭಿಸಿದ್ದು, ಇದರಿಂದ ಕೋಪಗೊಂಡ ಅಮಿತ್ ಶಾ ನೀವು ಭಾಷಣ ನಿಲ್ಲಿಸಿ ಎಂದು ತಾಕೀತು ಮಾಡಿದ್ದು ಆ ಬಳಿಕವೇ ಅನಿಲ್ ವಿಜ್ ಭಾಷಣವನ್ನು ಮೊಟಕುಗೊಳಿಸಿದ್ದಾರೆ. ಇದರ ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.