ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೊಳಗಾಗಿದ್ದಾರೆ. ಇದೇ ಹೊತ್ತಲ್ಲಿ ಹೆಚ್.ಡಿ. ರೇವಣ್ಣ ಅವರ ಮತ್ತೊಬ್ಬ ಪುತ್ರನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಈ ಕುರಿತಾಗಿ ಡಿಜಿಪಿ, ಎಸ್.ಪಿ., ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ದೂರು ನೀಡಲಾಗಿದೆ. ದೂರು ನೀಡಿದ ಯುವಕನ ವಿರುದ್ಧವೇ ಹಾಸನ ಜಿಲ್ಲೆ ಹೊಳೆನರಸೀಪುರ ಪೊಲೀಸ್ ಠಾಣೆಗೆ ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ.
ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪಹೊರಿಸಿ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತ ದೂರು ನೀಡಿದ್ದಾರೆ. ಆತ ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿರುವುದಾಗಿ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಐದು ಕೋಟಿ ರೂಪಾಯಿ ಕೊಡದಿದ್ದರೆ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಆರೋಪಿಸಿದ್ದ ಯುವಕ ಸುಳ್ಳು ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ ಎಂದು ಶಿವಕುಮಾರ್ ದೂರು ಸಲ್ಲಿಸಿದ್ದಾರೆ. ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡು ಮೂಲದ ಯುವಕ ಮನವಿ ಮಾಡಿದ್ದ. ನೀನೇ ಹೋಗಿ ಬಾಸ ಭೇಟಿ ಮಾಡು ಎಂದು ಅವರ ಫೋನ್ ನಂಬರ್ ಕೊಟ್ಟಿದ್ದೆ. ತೋಟದ ಮನೆಗೆ ಕೆಲಸ ಕೇಳಲು ಹೋಗಿದ್ದ ಆತ ನನಗೆ ನೀವು ಕೆಲಸ ಕೊಡಿಸಿಲ್ಲ. ನನಗೆ ಹಣ ಬೇಕಿದೆ, ನಿಮ್ಮ ಬಾಸ್ ನಿಂದ 5 ಕೋಟಿ ರೂ. ಕೊಡಿಸದಿದ್ದರೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತೇನೆ ಎಂದು ಯುವಕ ಬೆದರಿಕೆ ಹಾಕಿದ್ದಾನೆ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜ್ವಲ್ ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ತಮ್ಮ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಯುವಕ ದೂರು ನೀಡಿದ್ದಾನೆ ಡಿಜಿಪಿ, ಎಸ್.ಪಿ., ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.