ಹಾಸನ: ಜೆಡಿಎಸ್ ಎಂಎಲ್ ಸಿ ಡಾ.ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಎರಡನೇ ಕೇಸ್ ನ್ನು ಕೂಡ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಹಸ್ತಾಂತರ ಮಾಡಿ ಆದೇಶ ಹೊರಡಿಸಿದೆ.
ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅಸಹಜ ಲೈಂಗಿಕ ದೌರ್ಜನ್ಯ ಮೊದಲ ಕೇಸ್ ನಲ್ಲಿ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು, ಸಿಐಡಿ ತನಿಖೆ ಆರಂಭಿಸಿದೆ. ಇದೀಗ ಸೂರಜ್ ವಿರುದ್ಧದ ಎರಡನೇ ಕೇಸ್ ನ್ನು ಕೂಡ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವರ್ಗಾಯಿಸಿದೆ.
ಜೂನ್ 22ರಂದು ಸೂರಜ್ ರೇವಣ್ಣ ವಿರುದ್ಧ ಅರಕಲಗೂಡು ಮೂಲದ ಯುವಕ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಮೊದಲ ಪ್ರಕರಣ ದಾಖಲಿಸಿದ್ದ. ಜೂನ್ 23ರಂದು ಮೊದಲ ಕೇಸ್ ನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು. ಹೊಳೆನರಸೀಪುರದ ಯುವಕನೊಬ್ಬ ಮತ್ತೊಂದು ಕೇಸ್ ದಾಖಲಿಸಿದ್ದ ಇದೀಗ ಎರಡನೇ ಕೇಸ್ ನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಪ್ರಕರಣದ ಕಡತಗಳನ್ನು ಪೊಲೀಸರಿ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.