ನವದೆಹಲಿ: ತ್ವರಿತ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಸರಿಪಡಿಸಲಾಗದಷ್ಟು ಮುರಿದುಬಿದ್ದ ಮದುವೆ ಪ್ರಕರಣದಲ್ಲಿ ನೇರ ವಿಚ್ಛೇದನ ಸಾಧ್ಯವಿದೆ. ಈ ಅಧಿಕಾರ ತನಗೆ ಇದೆ ಎಂದು ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ತೀರ್ಪು ನೀಡಿದೆ.
ಸರಿಪಡಿಸಲಾಗದಷ್ಟು ಮುರಿದು ಬಿದ್ದ ಮದುವೆ ಪ್ರಕರಣಗಳ ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸದೆ ನೇರವಾಗಿ ವಿಚ್ಛೇದನ ನೀಡುವ ಅಧಿಕಾರ ಸಂವಿಧಾನದ 142ನೇ ಪರಿಚ್ಛೇದದ ಅಡಿ ತನಗೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ದಂಪತಿಗಳು 6ರಿಂದ 18 ತಿಂಗಳ ಕಾಲ ಕಾಯುವ ಅನಿವಾರ್ಯತೆ ತಪ್ಪಿದಂತಾಗಿದೆ.
ಶಿಲ್ಪಾ ಶೈಲೇಶ್ ಹಾಗೂ ವರುಣ್ ಶ್ರೀನಿವಾಸನ್ ಎಂಬುವವರು ಸಂವಿಧಾನದ 142ನೇ ಪರಿಚ್ಛೇದದಡಿ ತಮಗೆ ವಿಚ್ಛೇದನ ಕೊಡಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠದಿಂದ ಈ ಮಹತ್ವದ ತೀರ್ಪು ನೀಡಲಾಗಿದೆ.
ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನಕ್ಕಾಗಿ ಕಾರು ತಿಂಗಳು ಕಡ್ಡಾಯ ಕಾಯುವ ಅವಧಿಯನ್ನು ಕೂಡ ತೆಗೆದು ಹಾಕಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗಂಡ, ಹೆಂಡತಿ ಸಂಬಂಧ ಮುರಿದು ಬಿದ್ದು ಅದನ್ನು ಸುಧಾರಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಗುರುತಿಸಲು ಕೆಲವು ಅಂಶಗಳನ್ನು ತೀರ್ಪಿನಲ್ಲಿ ದಾಖಲಿಸಲಾಗಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ, ಸಂಜೀವ್ ಖನ್ನಾ, ವಿಕ್ರಮ್ ನಾಥ್, ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಈ ಆದೇಶ ನೀಡಿದೆ. ಜೀವನ ನಿರ್ವಹಣೆ, ಜೀವನಾಂಶ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಅಂಶಗಳನ್ನು ಹೇಗೆ ಸಮತೋಲನಗೊಳಿಸಬೇಕು ಎಂಬುದರ ಬಗ್ಗೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ.