ನವದೆಹಲಿ: ಚರ್ಮದಿಂದ ಚರ್ಮ ಸ್ಪರ್ಶವಿಲ್ಲದೆ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ವ್ಯಕ್ತಿಯನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ನ ನಾಗಪುರ ಪೀಠ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಲೈಂಗಿಕ ಉದ್ದೇಶದಿಂದ ದೇಹದ ನೇರ ಸ್ಪರ್ಶವಿಲ್ಲದಿದ್ದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ. ಬಟ್ಟೆ ಧರಿಸಿದಾಗ ಖಾಸಗಿ ಅಂಗ ಸ್ಪರ್ಶಿಸಿದರೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಪೀಠ ಹೇಳಿತ್ತು. ಆದರೆ, ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ವಿ. ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠದಲ್ಲಿ ಈ ಕುರಿತಾದ ಅರ್ಜಿಯ ವಿಚಾರಣೆ ನಡೆದಿದ್ದು, ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಮತ್ತು ಅಟಾರ್ನಿ ಜನರಲ್ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನಾಗಪುರ ನಿವಾಸಿ ಸತೀಶ್ ಸಿಹಿತಿನಿಸು ಕೊಡಿಸುವುದಾಗಿ ಪುಸಲಾಯಿಸಿ 12 ವರ್ಷದ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆರೋಪಿ ಬಾಂಬೆ ಹೈಕೋರ್ಟ್ ನಾಗಪುರ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಬಟ್ಟೆ ಧರಿಸಿದಾಗ ಬಾಲಕಿಯ ಸ್ತನಗಳನ್ನು ಸ್ಪರ್ಶಿಸಿದರೆ ಅದು ಲೈಂಗಿಕ ದೌರ್ಜನ್ಯ ಎಂದು ಪರಿಗಣಿತವಾಗುವುದಿಲ್ಲ. ಚರ್ಮದಿಂದ ಚರ್ಮ ಸ್ಪರ್ಶವಾಗಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯವಾಗುತ್ತದೆ ಎಂದು ನಾಗಪುರ ಬಾಂಬೆ ಹೈಕೋರ್ಟ್ ಪೀಠ ತೀರ್ಪು ನೀಡಿ ಲೈಂಗಿಕ ದೌರ್ಜನ್ಯ ಆರೋಪದಿಂದ ವ್ಯಕ್ತಿಯನ್ನು ಖುಲಾಸೆಗೊಳಿಸಿತ್ತು.
ಈ ಆದೇಶ ಅಪಾಯಕಾರಿ ನಿದರ್ಶನವಾಗುವ ಸಾಧ್ಯತೆ ಹಿನ್ನಲೆಯಲ್ಲಿ ಯೂತ್ ಬಾರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.