ನವದೆಹಲಿ: ಕೊರೋನಾ ಲಸಿಕೆ ಖರೀದಿಗಾಗಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂ. ಏನಾಯ್ತು…? ಈ ಬಗ್ಗೆ ಲೆಕ್ಕಪರಿಶೋಧನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಡಿಸೆಂಬರ್ ವೇಳೆಗೆ ದೇಶದ ಎಲ್ಲ ಜನರಿಗೆ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಲಸಿಕೆ ಖರೀದಿಗೆ 35 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಹೇಳಿದ್ದು, ಬಜೆಟ್ ನಲ್ಲಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂಪಾಯಿ ಏನಾಯಿತು ಎಂದು ಪ್ರಶ್ನಿಸಿದೆ.
ಎಷ್ಟು ಹಣವನ್ನು ಇದುವರೆಗೆ ಖರ್ಚು ಮಾಡಿದ್ದೀರಿ? ಲಸಿಕೆ ಖರೀದಿಗೆ ಯಾವಾಗ ಆದೇಶ ನೀಡಲಾಗಿದೆ? ಎಷ್ಟು ಬೆಲೆ ನಿಗದಿ ಮಾಡಲಾಗಿದೆ? ಕೊವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ಲಸಿಕೆಗಾಗಿ ಎಷ್ಟು ಹಣ ಕೊಡಲಾಗಿದೆ ಎಂಬುದರ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಹೇಳಿದೆ.
18 ರಿಂದ 44 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿ ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅನೇಕ ಪ್ರಕರಣಗಳಲ್ಲಿ ಸಾವು ಸಂಭವಿಸುತ್ತಿವೆ. ಅಂತಹ ವಯೋಮಿತಿಯವರಿಗೆ ಏಕೆ ಲಸಿಕೆ ನೀಡಿಲ್ಲ. ಜನರಿಗೆ ಸಮರ್ಪಕವಾಗಿ ಲಸಿಕೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಲಸಿಕೆ ಪೂರೈಕೆಗೆ ಅಗತ್ಯವಾದ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಲೆಕ್ಕ ಪರಿಶೋಧನೆ ನಡೆಸಿ ವರದಿ ನೀಡಬೇಕೆಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ.