ನವದೆಹಲಿ: ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಬಯಕೆ ನಿಯಂತ್ರಿಸಿಕೊಳ್ಳಬೇಕು ಎಂದು ಹೇಳಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ಕೊಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಪ್ರೇಮ ಸಂಬಂಧ ಹೊಂದಿರುವ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಖುಲಾಸೆಗೊಂಡಿದ್ದ ಅಪರಾಧಿಗೆ ನೀಡಿದ್ದ 20 ವರ್ಷ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಹದಿಹರೆಯದ ಹುಡುಗಿಯರ ಕುರಿತ ಹೇಳಿಕೆಗೆ ಕಿಡಿಕಾರಿದ ಸುಪ್ರೀಂ ಕೋರ್ಟ್ ಆರೋಪಿ ವಿರುದ್ಧದ ಶಿಕ್ಷೆಯನ್ನು ಮರು ಸ್ಥಾಪಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ, ಉಜ್ವಲ್ ಭುಯಾನ್ ಅವರನ್ನೊಳಗೊಂಡ ಪೀಠವು ಆದೇಶ ನೀಡಿದ್ದು, ಕೊಲ್ಕತ್ತಾ ಹೈಕೋರ್ಟ್ ನ ಅವಲೋಕನಗಳು ಅತ್ಯಂತ ಆಕ್ಷೇಪಾರ್ಹ ಮತ್ತು ಸಂಪೂರ್ಣ ಅನಗತ್ಯವಾಗಿವೆ. ತೀರ್ಪುಗಳನ್ನು ಬರೆಯುವಾಗ ನ್ಯಾಯಮೂರ್ತಿಗಳಾದವರು ವೈಯಕ್ತಿಕ ಅಭಿಪ್ರಾಯಗಳನ್ನು ಹೊರಹಾಕುವ ರೀತಿಯಲ್ಲಿ ಬೋಧನೆ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯನ್ನು ಖುಲಾಸೆಗೊಳಿಸಿದ ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳಾದ ಚಿತ್ತರಂಜನ್ ದಾಸ್ ಮತ್ತು ಪಾರ್ಥಸಾರಥಿ ಸೇನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ನಡೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಿಂದ ಈ ಆದೇಶ ನೀಡಲಾಗಿದೆ.