ಬೆಂಗಳೂರು: ರಾಜ್ಯ ಪಠ್ಯಕ್ರಮದ 5, 8 ಮತ್ತು 9ನೇ ತರಗತಿ ಮಕ್ಕಳ ಬೋರ್ಡ್ ಪರೀಕ್ಷೆ ಫಲಿತಾಂಶ ಇಲ್ಲದೆ ಮಕ್ಕಳು ಅತಂತ್ರರಾಗಿದ್ದಾರೆ. ಬೋರ್ಡ್ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಅದು ತೆರವಾಗದ ಕಾರಣ ಬೇರೆ ಶಾಲೆ ಸೇರಲಾಗದೆ ಸಮಸ್ಯೆ ಎದುರಾಗಿದೆ.
ಬೋರ್ಡ್ ಪರೀಕ್ಷೆ ಸಂಬಂಧ ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವೆ ಕಾನೂನು ಹೋರಾಟದ ಬಿಕ್ಕಟ್ಟು ಮುಂದುವರೆದ ಹಿನ್ನೆಲೆಯಲ್ಲಿ 5, 8, 9ನೇ ತರಗತಿ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟು ಸರ್ಕಾರ ಪ್ರಕರಣದ ತುರ್ತು ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಪೋಷಕರು, ಶಿಕ್ಷಕರು, ಖಾಸಗಿ ಶಾಲೆ ಆಡಳಿತ ಮಂಡಳಿಗಳ ಸಂಘಟನೆಗಳು ಒತ್ತಾಯಿಸಿವೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 5, 8, 9ನೇ ತರಗತಿಗೆ ನಡೆಸಿದ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಏ. 8ರಂದು ಮಧ್ಯಂತರ ಆದೇಶ ನೀಡಲಾಗಿದ್ದು, ಯಾವುದೇ ಶಾಲೆಗಳು ಫಲಿತಾಂಶ ಪ್ರಕಟಿಸಿದ್ದರೆ ಅದನ್ನು ತಡೆಹಿಡಿಯಲು ಸೂಚಿಸಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಮಕ್ಕಳ ಮುಂದಿನ ದಾಖಲಾತಿ ವಿಚಾರವಾಗಿ ಸರ್ಕಾರ ಯಾವುದೇ ಮಧ್ಯಂತರ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಿಲ್ಲ.
ಪ್ರಕರಣ ಫಲಿತಾಂಶ ವಿಚಾರ ನ್ಯಾಯಾಲಯದಲ್ಲಿದ್ದರೂ 9ನೇ ತರಗತಿವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸಲು ಅವಕಾಶವಿಲ್ಲದ ಕಾರಣ ಮುಂದಿನ ತರಗತಿ ದಾಖಲಾತಿಗೆ ಹಾಗೂ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ಮುಂದಿನ ತರಗತಿಯ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆಯಾಗುವುದಿಲ್ಲವೆಂದು ಹೇಳಲಾಗಿದೆ.