
ಹಿಂದೂ ಮಹಿಳೆ ತನ್ನ ತಂದೆ ಮನೆಯ ಯಾವುದೇ ಸದಸ್ಯನನ್ನು ತನ್ನ ಆಸ್ತಿಯ ಉತ್ತರಾಧಿಕಾರಿನ್ನಾಗಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಕೆಯ ತವರು ಮನೆಯ ಸದಸ್ಯರನ್ನ ಹೊರಗಿನವರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಆಕೆಯ ಇಂತಹ ಸಂಬಂಧಿಗಳನ್ನ ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಬಹುದಾಗಿದೆ.
ಹಿಂದೂ ಉತ್ತರಾಧಿಕಾರಿ ಕಾನೂನು 1956ರ 13.1ನೇ ವಿಧಿಯ ಪ್ರಕಾರ ಮಹಿಳೆಯ ತಂದೆಯ ಮನೆಯ ಸದಸ್ಯರು ಕೂಡ ಆಕೆಯ ಆಸ್ತಿಯ ಉತ್ತರಾಧಿಕಾರಿಗಳ ಸಾಲಿನಲ್ಲಿಯೇ ಬರುತ್ತಾರೆ. ಹೀಗಾಗಿ ಅವರು ಆಸ್ತಿಯನ್ನ ಸ್ವಾದೀನ ಪಡಿಸಿಕೊಳ್ಳಬಹುದಾಗಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ .
ಏನಿದು ಕೇಸ್..?
ಹಿಂದೂ ಮಹಿಳೆಯೊಬ್ಬರಿಗೆ ಆಕೆಯ ಪತಿಯ ಮನೆಯ ಕಡೆಯಿಂದ ಆಸ್ತಿ ದೊರಕಿತ್ತು. ಆದರೆ ಆಕೆಯ ಪತಿ 1953ರಲ್ಲಿ ನಿಧನರಾಗಿದ್ದರು. ಈ ದಂಪತಿಗೆ ಮಕ್ಕಳು ಇರಲಿಲ್ಲ. ಹೀಗಾಗಿ ಪತಿಯ ಅರ್ಧ ಕೃಷಿ ಆಸ್ತಿ ವಿಧವೆ ಪತ್ನಿಯ ಪಾಲಾಗಿತ್ತು. ಉತ್ತರಾಧಿಕಾರ ಕಾನೂನು 1956ರ 14ನೇ ವಿಧಿಯ ಪ್ರಕಾರ, ಈ ಪತ್ನಿಯೇ ದಿವಂಗತ ಪತಿಯ ಸಂಪೂರ್ಣ ಆಸ್ತಿಗೆ ಮಾಲೀಕರಾಗಿದ್ದರು. ಇದಾದ ಬಳಿಕ ಈ ಮಹಿಳೆ ತನ್ನ ಅಣ್ಣನ ಮಕ್ಕಳ ಹೆಸರಿಗೆ ಆಸ್ತಿಯ ಉತ್ತರಾಧಿಕಾರಿತ್ವವನ್ನ ನೀಡಿದ್ದರು.
ಮಹಿಳೆ ಸಹೋದರರ ಪುತ್ರರಿಗೆ ಈ ಆಸ್ತಿಯ ಮಾಲೀಕತ್ವ ನೀಡಿತ್ತು. ಆದರೆ ಇದಕ್ಕೆ ಆಕೆಯ ಗಂಡನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಆಕೆ ತನ್ನ ತವರು ಮನೆಗೆ ಆಸ್ತಿ ನೀಡಿದ್ದನ್ನ ಪ್ರಶ್ನಿಸಿದ್ದರು. ಹಿಂದೂ ಮಹಿಳೆ ವಿವಾಹದ ನಂತರ ತವರು ಮನೆಗೆ ಸಂಬಂಧ ಹೊಂದಿರೋದಿಲ್ಲ ಎಂಬುದು ಅವರ ವಾದವಾಗಿತ್ತು.