ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಜೈಲುಪಾಲಾಗಿದ್ದ ಆರೋಪಿಯ ಜಾಮೀನು ಅರ್ಜಿಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ . ಹಾಗೂ ಗಂಡನ ಮನೆಯಲ್ಲಿ ಪತ್ನಿಗೆ ಯಾವುದೇ ರೀತಿಯಲ್ಲಿ ಹಾನಿ ಉಂಟಾದರೂ ಅದಕ್ಕೆ ಪತಿಯೇ ಜವಾಬ್ದಾರಿ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಪೀಠ ಪತಿಯ ಮನೆಯಲ್ಲಿ ಪತ್ನಿಗೆ ಒಳ್ಳೆಯದೇ ಆಗಲಿ ಇಲ್ಲವೇ ಸಂಬಂಧಿಕರಿಂದ ಹಿಂಸೆಯೇ ಆಗಲಿ.ಇದೆಲ್ಲದ್ದಕ್ಕೂ ಪತಿಯೇ ಜವಬ್ದಾರನಾಗಿರುತ್ತಾನೆ ಎಂದು ಹೇಳಿದ್ದಾರೆ.
ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಜೈಲುಪಾಲಾಗಿರುವ ವ್ಯಕ್ತಿಯದ್ದು ಇದೆ ಮೂರನೇ ಮದುವೆಯಾಗಿದೆ. ಆದರೆ ಮಹಿಳೆಗೆ ಇದು ಮೊದಲನೇ ಮದುವೆಯಾಗಿತ್ತು. ಮದುವೆಯಾದ ಒಂದು ವರ್ಷಕ್ಕೆ ಅಂದರೆ 2018ರಲ್ಲಿ ಈ ಮಹಿಳೆ ಮಗು ಜನ್ಮ ನೀಡಿದ್ದಳು. ಕಳೆದ ವರ್ಷ ಮಹಿಳೆ ಲೂಧಿಯಾನಾ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ದೂರನ್ನ ದಾಖಲಿಸಿದ್ದಳು. ವರದಕ್ಷಿಣೆ ಕಿರುಕುಳ ನೀಡಿ ನನಗೆ ಪತಿ , ಆತನ ತಂದೆ ಹಾಗೂ ತಾಯಿ ಹಲ್ಲೆ ನಡೆಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಳು.
ಆರೋಪಿ ಪರ ವಕೀಲ ಕುಶಾಗ್ರ ಮಹಾಜನ್ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಆರೋಪಿಗೆ ಪ್ರಶ್ನೆಗಳ ಸುರಿಮಳೆಗೈದ ನ್ಯಾಯಪೀಠ. ನೀವು ಯಾವ ರೀತಿಯ ಮನುಷ್ಯರಿದ್ದೀರಿ..? ಮಹಿಳೆ ಮಾಡಿರುವ ಆರೋಪದ ಪ್ರಕಾರ ಆಕೆಯನ್ನ ಕೊಲೆ ಮಾಡಲು ಯತ್ನಿಸಿದ್ದೀರಾ . ಅಲ್ಲದೇ ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆ. ಅದು ಮಾತ್ರವಲ್ಲದೇ ನಿಮ್ಮದೇ ಪತ್ನಿಗೆ ಅದು ಹೇಗೆ ನೀವು ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ಮಾಡಲು ಸಾಧ್ಯ ಎಂದು ಕೇಳಿದೆ.
ಕೋರ್ಟ್ನ ಈ ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ಆರೋಪಿ ಪರ ವಕೀಲ ಕುಶಾಗ್ರ, ದೂರುದಾರ ಮಹಿಳೆ ತನ್ನ ಮಾವನ ಮೇಲೆ ನಿರಂತರ ಹಲ್ಲೆ ನಡೆಸುತ್ತಿದ್ದಳು ಎಂದು ಹೇಳಿದ್ದಾರೆ. ವಿಚಾರಣೆ ಪೂರ್ಣಗೊಂಡ ಬಳಿಕ ಜಾಮೀನು ಅರ್ಜಿ ತಿರಸ್ಕರಿಸಿದ ಸರ್ವೋಚ್ಛ ನ್ಯಾಯಾಲಯ, ಪತಿಯ ಮನೆಯಲ್ಲಿ ಮಹಿಳೆಗೆ ಯಾವುದೇ ರೀತಿಯ ಹಾನಿ ಉಂಟಾದರೂ ಸಹ ಅದರ ಮೂಲ ಕಾರಣ ಪತಿಯೇ ಆಗಿರುತ್ತಾನೆ ಎಂದು ಹೇಳಿದೆ.