ಸಿಬಿಎಸ್ಇ, ಐಸಿಎಸ್ಇ ಮತ್ತು ಐಎಸ್ಸಿ ಟರ್ಮ್ 1 ಪರೀಕ್ಷೆಗಳನ್ನು ಹೈಬ್ರಿಡ್ ಮೋಡ್‌ನಲ್ಲಿ ನಡೆಸುವಂತೆ ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 2022 ರ ಶೈಕ್ಷಣಿಕ ವರ್ಷದಲ್ಲಿ ಟರ್ಮ್ 1 ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುವುದು ಅನಿವಾರ್ಯವಾಗಿದೆ. 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಆಫ್‌ಲೈನ್ ಬದಲು ಹೈಬ್ರಿಡ್ ಮೋಡ್ (ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ) ಆಯ್ಕೆಯನ್ನು ಒದಗಿಸುವಂತೆ ಅರ್ಜಿಯಲ್ಲಿ ಹೇಳಲಾಗಿತ್ತು. ಆದ್ರೆ ಹೈಬ್ರಿಡ್ ಮೋಡ್ ನೀಡಲು ನ್ಯಾಯಾಲಯ ನಿರಾಕರಿಸಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ ಮೊದಲ ಸೆಮಿಸ್ಟರ್ ಪರೀಕ್ಷೆಗಳು ನವೆಂಬರ್ 16 ರಿಂದ ಪ್ರಾರಂಭವಾಗಿವೆ. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಮೊದಲ ಸೆಮಿಸ್ಟರ್‌ನ ಬೋರ್ಡ್ ಪರೀಕ್ಷೆಗಳು ನವೆಂಬರ್ 22 ರಿಂದ ಪ್ರಾರಂಭವಾಗಲಿವೆ. ಸಿಬಿಎಸ್‌ಇ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬೋರ್ಡ್ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 6,500 ರಿಂದ 15,000 ಕ್ಕೆ ಹೆಚ್ಚಿಸಲಾಗಿದೆ ಎಂದರು.
ಪರೀಕ್ಷೆ ವೇಳೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು, ಯಾರಿಗೂ ಸಮಸ್ಯೆಯಾಗದಂತೆ ಬೋರ್ಡ್ ನೋಡಿಕೊಳ್ಳುತ್ತದೆ ಎಂದು ಕೋರ್ಟ್ ನಂಬುತ್ತದೆ ಎಂದು ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಸಿಟಿ ರವಿಕುಮಾರ್ ಪೀಠ ತಿಳಿಸಿದೆ. ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಆರು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.