ಅಕ್ರಮ ಪ್ರವೇಶಕ್ಕಾಗಿ ಮಹಾರಾಷ್ಟ್ರದ ಧುಲೆ ವೈದ್ಯಕೀಯ ಕಾಲೇಜಿಗೆ ಸುಪ್ರೀಂ ಕೋರ್ಟ್ ಸೋಮವಾರ 2.5 ಕೋಟಿ ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ರಕ್ಷಿಸಿದೆ.
ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ತನ್ನ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ 2.5 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ಧುಲೆಯ ಅಣ್ಣಾಸಾಹೇಬ್ ಚೂಡಾಮನ್ ಪಾಟೀಲ್ ಮೆಮೋರಿಯಲ್ ಮೆಡಿಕಲ್ ಕಾಲೇಜಿಗೆ ಕೋರ್ಟ್ ಹೇಳಿದೆ.
ವೈದ್ಯಕೀಯ ಕಾಲೇಜು ತನ್ನ ಎಂಬಿಬಿಎಸ್ ಕೋರ್ಸ್ಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳದಂತೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಅದನ್ನು ಮುಂದುವರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ. ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ವಿದ್ಯಾರ್ಥಿಗಳ ಪ್ರವೇಶಕ್ಕೆ ತೊಂದರೆ ಮಾಡದೇ ವೈದ್ಯಕೀಯ ಕಾಲೇಜಿಗ ದಂಡ ಪಾವತಿಸುವಂತೆ ಹೇಳಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಕೇಂದ್ರೀಯ ಕೌನ್ಸೆಲಿಂಗ್ ಮೂಲಕ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದರಿಂದ ಈಗಾಗಲೇ ನೀಡಲಾದ ಪ್ರವೇಶಗಳಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ದಂಡವನ್ನ ಪಾವತಿಸಲು ಕಾಲೇಜಿಗೆ ಸೂಚಿಸಿದ್ದು, ಈ ಮೊತ್ತವನ್ನು ವಿದ್ಯಾರ್ಥಿಗಳಿಂದ ಯಾವುದೇ ರೀತಿಯಲ್ಲಿ ವಸೂಲಿ ಮಾಡುವಂತಿಲ್ಲ ಎಂದು ಎಚ್ಚರಿಸಿದೆ.