
ನವದೆಹಲಿ: ಕರ್ನಾಟಕದ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಕಾರ್ಯಕಾರಿ ಸಮಿತಿಯಲ್ಲಿ ಶೇಕಡ 30ರಷ್ಟು ಹುದ್ದೆಗಳ ಜೊತೆ ಖಜಾಂಚಿ ಹುದ್ದೆಯನ್ನು ಮಹಿಳೆಯರಿಗೆ ಕಾಯ್ದಿರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಈ ಹಿಂದೆ ಬೆಂಗಳೂರು ವಕೀಲರ ಸಂಘದಲ್ಲಿ ಮಹಿಳಾ ವಕೀಲರಿಗೆ ಖಜಾಂಚಿ ಹುದ್ದೆ ಸೇರಿ ಮೀಸಲಾತಿ ನೀಡಿ ಜನವರಿ 24 ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೂ ಇದು ಅನ್ವಯಿಸಲಿದೆ. ಜಿಲ್ಲಾ ವಕೀಲರ ಸಂಘದಲ್ಲಿ ಮಹಿಳೆಯರಿಗೆ ಶೇ. 30ರಷ್ಟು ಹುದ್ದೆ ಮೀಸಲಿಡಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರ ಪೀಠ ಹೇಳಿದೆ.
ವಿವಿಧ ಚುನಾಯಿತ ವಕೀಲರ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಕಲ್ಪಿಸುವುದು ಈ ಸಮಯದಲ್ಲಿ ಅಗತ್ಯವಾಗಿದೆ. ಕಾನೂನುಗಳಲ್ಲಿ ಈ ಕುರಿತ ನಿಬಂಧನೆಗಳಿಲ್ಲ ಎಂದು ನ್ಯಾಯಪೀಠ ಹೇಳಿದ್ದು, 140ನೇ ವಿಧಿಯ ಅಡಿಯಲ್ಲಿ ಮೀಸಲಾತಿ ಆದೇಶ ನೀಡಿದೆ.