ನವದೆಹಲಿ: ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಇಮಾಮ್ ಗಳಿಗೆ ಗೌರವಧನ ನೀಡುವ ಕುರಿತ ನ 1993 ರ ಸುಪ್ರೀಂಕೋರ್ಟ್ ಆದೇಶ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗ ಹೇಳಿದೆ.
1993ರ ಸುಪ್ರೀಂ ಕೋರ್ಟ್ ಆದೇಶವೇ ಸಂವಿಧಾನ ಬಾಹಿರವಾಗಿದೆ. ತೆರಿಗೆದಾರರ ಹಣ ನಿರ್ದಿಷ್ಟ ವರ್ಗಕ್ಕೆ ನೀಡುವುದು ತಪ್ಪು ಎಂದು ಹೇಳಲಾಗಿದೆ. ಮಸೀದಿಗಳಲ್ಲಿ ಕೆಲಸ ಮಾಡುವ ಮೌಲ್ವಿಗಳಿಗೆ ವೇತನ ನೀಡಲು 1993ರಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶ ಸಂವಿಧಾನಬಾಹಿರವಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗ ಮಹತ್ವದ ಆದೇಶ ಪ್ರಕಟಿಸಿದೆ. ನ್ಯಾಯಾಲಯದ ಕ್ರಮದಿಂದಾಗಿ ತಪ್ಪು ನಿರ್ದೇಶನ ಸೃಷ್ಟಿಯಾಗಿದ್ದು, ಅನಗತ್ಯ ರಾಜಕೀಯ ಮತ್ತು ಸಾಮಾಜಿಕ ಕಲಹಕ್ಕೆ ನಾಂದಿ ಹಾಡಿದೆ ಎಂದು ಹೇಳಲಾಗಿದೆ.
ತೆರಿಗೆದಾರರ ಹಣವನ್ನು ಯಾವುದೇ ನಿರ್ದಿಷ್ಟ ಸಮುದಾಯದ ಅನುಕೂಲಕ್ಕೆ ಬಳಕೆ ಮಾಡದಂತೆ ಸಂವಿಧಾನ ಹೇಳುತ್ತದೆ. ಆದರೆ, ಸುಪ್ರೀಂಕೋರ್ಟ್ ನೀಡಿದ ತೀರ್ಪು ಅದಕ್ಕೆ ವಿರುದ್ಧವಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಆದೇಶದ ಪ್ರತಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳುಹಿಸಬೇಕು. ಸಂವಿಧಾನದ 25 ರಿಂದ 28 ರ ವರೆಗಿನ ಪರಿಚ್ಛೇದ ಜಾರಿಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಣದಲ್ಲಿ ವಿವಿಧ ಧರ್ಮೀಯ ಅರ್ಚಕರಿಗೆ ನೀಡಲಾಗುತ್ತಿರುವ ಮಾಸಿಕ ವೇತನಕ್ಕೆ ಸಮಾನವಾಗಿ ಎಲ್ಲಾ ಧರ್ಮಗಳನ್ನು ತರಬೇಕು ಎಂದು ಹೇಳಿದ್ದಾರೆ.
ಇಮಾಮ್ ಗಳಿಗೆ ದೆಹಲಿ ಸರ್ಕಾರ ಮತ್ತು ದೆಹಲಿ ವಕ್ಫ್ ಮಂಡಳಿ ವೇತನ ನೀಡುತ್ತಿರುವ ಬಗ್ಗೆ ಆರ್ಟಿಐ ಕಾರ್ಯಕರ್ತರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಸೂಕ್ತ ಉತ್ತರ ಸಿಗದ ಹಿನ್ನೆಲೆಯಲ್ಲಿ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ದೆಹಲಿಯಲ್ಲಿ ಇಮಾಮ್ ಗಳಿಗೆ 18,000 ಗೌರವ ಧನ ಪಾವತಿಸುತ್ತಿದ್ದು, ದೇಗುಲಗಳಲ್ಲಿನ ಅರ್ಚಕರಿಗೆ ಕೇವಲ ಎರಡು ಸಾವಿರ ರೂ. ಸಿಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಮಾತ್ರ ಈ ರೀತಿಯ ವಿಶೇಷ ಧಾರ್ಮಿಕ ಸೌಲಭ್ಯ ನೀಡಿದರೆ ಅಂತರ್ಧರ್ಮಿಯ ಸೌಹಾರ್ದತೆಗೆ ಭಂಗವಾಗುತ್ತದೆ. ಮುಸ್ಲಿಮೇತರ ಇತರೆ ಧರ್ಮೀಯರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದ ಆಯೋಗ ಅರ್ಜಿದಾರರಿಗೆ 25,000 ರೂ. ಪರಿಹಾರ ನೀಡುವಂತೆ ದೆಹಲಿ ವಕ್ಫ್ ಮಂಡಳಿಗೆ ಸೂಚಿಸಿದೆ.