ಉತ್ತರ ಪ್ರದೇಶದ ನೋಯ್ಡಾದಲ್ಲಿ ಸುಪ್ರೀಂ ಕೋರ್ಟ್ ವಕೀಲರಾಗಿದ್ದ ಪತ್ನಿಯನ್ನು ಕೊಂದ ಭಾರತೀಯ ಕಂದಾಯ ಸೇವೆ ಮಾಜಿ ಅಧಿಕಾರಿಯನ್ನು ಸೋಮವಾರ ಬಂಧಿಸಲಾಗಿದೆ.
ಆರೋಪಿ ಅಜಯ್ ನಾಥ್(62) ಭಾನುವಾರ ಅಪರಾಧ ಎಸಗಿದ ನಂತರ ಬಂಗಲೆಯ ಸ್ಟೋರ್ ರೂಂನಲ್ಲಿ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
61 ವರ್ಷದ ಸಂತ್ರಸ್ತೆ ರೇಣು ಸಿನ್ಹಾ ತನ್ನ ಸಹೋದರನ ಪುನರಾವರ್ತಿತ ಫೋನ್ ಕರೆಗಳಿಗೆ ಎರಡು ದಿನಗಳಿಂದ ಪ್ರತಿಕ್ರಿಯಿಸಿರಲಿಲ್ಲ ಇದರಿಂದ ಆತಂಕಗೊಂಡ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಬಂಗಲೆಯೊಳಗೆ ಬಲವಂತವಾಗಿ ಪ್ರವೇಶಿಸಿದ ನಂತರ, ಬಾತ್ರೂಮ್ನಲ್ಲಿ ರೇಣು ಶವವನ್ನು ಪೊಲೀಸರು ಪತ್ತೆ ಮಾಡಿದರು. ಘಟನೆಯ ನಂತರ ನಾಪತ್ತೆಯಾಗಿದ್ದ ಆಕೆಯ ಪತಿ ಫೋನ್ ಆಫ್ ಆಗಿದ್ದರಿಂದ ಸಂಪರ್ಕಕ್ಕೆ ಸಿಗಲಿಲ್ಲ. ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಸಹೋದರ ಬಹಿರಂಗಪಡಿಸಿದ್ದಾನೆ.
ಇದರ ಬೆನ್ನಲ್ಲೇ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದು, ಬಂಗಲೆಯ ಸ್ಟೋರ್ ರೂಂನಲ್ಲಿ ಪತ್ತೆಯಾಗಿದ್ದಾರೆ. ಅಜಯ್ ನಾಥ್ ಬಂಗಲೆಗೆ ಬೀಗ ಜಡಿದು ಟೆರೇಸ್‌ನಲ್ಲಿರುವ ಖಾಲಿ ರೂಂನಲ್ಲಿ ಆಶ್ರಯ ಪಡೆದಿದ್ದ. ನಂತರ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ವಿಚಾರಣೆ ವೇಳೆ, ಅಜಯ್ ನಾಥ್ ಅವರು ತಮ್ಮ ಬಂಗಲೆಯನ್ನು 4 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯೋಜಿಸಿದ್ದರು. ಅಲ್ಲದೇ, ಮುಂಗಡವನ್ನೂ ತೆಗೆದುಕೊಂಡಿದ್ದರು. ಆದರೆ, ಅವರ ಪತ್ನಿ ಮನೆ ಮಾರಾಟಕ್ಕೆ ವಿರುದ್ಧವಾಗಿದ್ದರು. ಮೃತ ವಕೀಲರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಮತ್ತು ಇತ್ತೀಚೆಗಷ್ಟೇ, ಒಂದು ತಿಂಗಳ ಹಿಂದೆ ಕ್ಯಾನ್ಸರ್ ಮುಕ್ತ ಎಂದು ಘೋಷಿಸಲಾಯಿತು.
ಪ್ರಾಥಮಿಕ ತನಿಖೆಯಲ್ಲಿ ರೇಣು ಅತಿಯಾದ ರಕ್ತ ಸೋರಿಕೆಯಿಂದ ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ನಿಖರ ಕಾರಣ ದೃಢಪಡಲಿದೆ. ಪೊಲೀಸರು ಅಪರಾಧ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿ, ತನಿಖೆ ಮುಂದುವರೆಸಿದ್ದಾರೆ.