ಬೆಂಗಳೂರು: ಗೋರಿಪಾಳ್ಯವನ್ನು ‘ಪಾಕಿಸ್ತಾನ’ ಎಂದು ಕರೆದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ವಿಷಾದ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಇತ್ತೀಚೆಗೆ ನ್ಯಾಯಾಲಯದ ವಿಚಾರಣೆ ವೇಳೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ನಿಂದ ವರದಿ ಕೇಳಿತ್ತು. ಹಾಗೂ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಜಮೀನ್ದಾರ-ಬಾಡಿಗೆದಾರ ವಿವಾದವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಶ್ರೀಶಾನಂದ, ಬೆಂಗಳೂರಿನಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶ ಗೋರಿಪಾಳ್ಯವನ್ನು “ಪಾಕಿಸ್ತಾನ” ಎಂದು ಉಲ್ಲೇಖಿಸಿದ್ದರು ಮತ್ತು ಮಹಿಳಾ ವಕೀಲರನ್ನು ಒಳಗೊಂಡ ಸ್ತ್ರೀ ವಿರೋಧಿ ಕಾಮೆಂಟ್ ಮಾಡಿದ್ದರು.
ನನ್ನ ಹೇಳಿಕೆಯಿಂದ ನೋವುಂಟಾಗಿದ್ದರೆ ಪ್ರಾಮಾಣಿಕ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ವಕೀಲರ ಸಂಘದ ಪ್ರತಿನಿಧಿಗಳ ಸಮ್ಮುಖದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿಕೆ ನೀಡಿದ್ದಾರೆ.
ಮೈಸೂರು ರಸ್ತೆ ಫ್ಲೈ ಓವರ್ ನಲ್ಲಿ ಆಟೋದಲ್ಲಿ 10 ಜನರನ್ನು ತುಂಬುತ್ತಾರೆ. ಇಲ್ಲಿ ಕಾನೂನು ಅನ್ವಯವಾಗುವುದಿಲ್ಲ. ಗೋರಿಪಾಳ್ಯದಿಂದ ಮಾರ್ಕೆಟ್ ರಸ್ತೆ ಪಾಕಿಸ್ತಾನದಲ್ಲಿದೆ. ಇಂಡಿಯಾದಲ್ಲಿ ಇಲ್ಲ. ಎಂತಹ ಸ್ಟ್ರಿಕ್ಟ್ ಅಧಿಕಾರಿ ಹಾಕಿದರೂ ಅನ್ವಯಿಸಲ್ಲ, ಇದೇ ವಾಸ್ತವಾಂಶ ಎಂದು ನ್ಯಾಯಮೂರ್ತಿ ಶ್ರೀಶಾನಂದ ಹೇಳಿದ್ದರು. ಜೊತೆಗೆ ಮಹಿಳಾ ವಕೀಲರೊಬ್ಬರಿಗೆ ಮಾಡಿದ ವ್ಯಂಗ್ಯ ವೈರಲ್ ಆಗಿತ್ತು.
ಸುಪ್ರೀಂ ಕೋರ್ಟ್ ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನಿಂದ ವರದಿ ಕೇಳಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ವಿಷಾದ ವ್ಯಕ್ತಪಡಿಸಿದ್ದಾರೆ.