ನವದೆಹಲಿ: ಜಾತಿ ನಿಂದನೆಯ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಜಾತಿಯ ಆಧಾರದಲ್ಲಿ ಅವಮಾನ ಮಾಡುವ ಉದ್ದೇಶವಿಲ್ಲದೆ ದೂರುದಾರ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಮಾತ್ರಕ್ಕೆ ಪ್ರಕರಣವನ್ನು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಅಸ್ಪೃಶ್ಯತೆ, ಜಾತಿ ತಾರತಮ್ಯ, ಪಾವಿತ್ರ್ಯತೆಗಳ ಆಧಾರದಲ್ಲಿ ಉದ್ದೇಶಪೂರ್ವಕವಾಗಿ ಅವಮಾನವಾಗಿದ್ದಲ್ಲಿ 1989ರ ಕಾಯ್ದೆಯಡಿ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ
ಶಾಸಕ ಪಿ.ವಿ. ಶ್ರೀನಿಜನ್ ತಮ್ಮ ಮೇಲೆ ದಾಖಲಿಸಿದ್ದ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ದುರುದ್ದೇಶಪೂರಿತವಾಗಿದೆ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಯೂಟ್ಯೂಬರ್, ಮರುನಾಡನ್ ಮಲಯಾಳಿ ಸಂಪಾದಕ ಶಾಜನ್ ಸ್ಕಾರಿಯಾ ಈ ಹಿಂದೆ ಕೇರಳ ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸ್ಕಾರಿಯಾ ಅವರ ವಿಡಿಯೋದಲ್ಲಿ ಶಾಸಕನ ವಿರುದ್ಧ ದ್ವೇಷಕಾರುವ ಉದ್ದೇಶವಿಲ್ಲ. ದೂರುದಾರನನ್ನಷ್ಟೇ ಗುರಿಯಾಗಿಸಲಾಗಿದೆ ಹೊರತೂ ಆತನ ಜಾತಿಯನ್ನಲ್ಲ ಎಂದು ನ್ಯಾಯಪೀಠ ತಿಳಿಸಿ ಜಾಮೀನು ಮಂಜೂರು ಮಾಡಿದೆ.
ಎಸ್‌ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಪ್ರಕರಣದಲ್ಲಿ ಸ್ಕೇರಿಯಾಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡುವಂತೆ ಆದೇಶ ನೀಡಿದೆ.