ನವದೆಹಲಿ: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೂರುದಾರ ಒಪ್ಪಿದರೆ ಮಾತ್ರ ರಾಜಿ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ನ ನ್ಯಾ. ಸಿ.ಟಿ.ರವಿಕುಮಾರ್ ಹಾಗೂ ನ್ಯಾ. ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಮೇಲ್ಮನವಿದಾರ ರಾಜಿ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸದೇ ಇದ್ದಾಗ ಹೈಕೋರ್ಟ್ ಸಿಆರ್ ಪಿಸಿ ಸೆಕ್ಷನ್ 482ರ ಪ್ರಕಾರ ತನ್ನ ಅಧಿಕಾರ ಬಳಸಿ ಚೆಕ್ ಅಮಾನ್ಯ ಪ್ರಕರಣವನ್ನು ರದ್ದುಗೊಳಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಆರೋಪಿ ರಾಜಿಗೆ ಒಪ್ಪಿದರೂ ಫಿರ್ಯಾದಿಯ ಸಮ್ಮತಿ ಇದ್ದರೆ ಮಾತ್ರ ಚೆಕ್ ಅಮಾನ್ಯ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದು. ನೆಗೋಷಿಯೇಬಲ್ ಇನ್ಸ್ ಟ್ರುಮೆಂಟ್ಸ್ ಆಕ್ಟ್
ಸೆಕ್ಷನ್ 147 ಮತ್ತು ಸಿಆರ್ ಪಿಸಿ ಸೆಕ್ಷನ್ 482 ವಿಭಿನ್ನ ಆಯಾಮಗಳನ್ನು ಹೊಂದಿದೆ. ನ್ಯಾಯ ದೊರಕಿಸಿಕೊಡಲು ಈ ಸೆಕ್ಷನ್ ಬಳಸಬಹುದಾಗಿದೆ. ಆದರೆ ನೆಗೋಷಿಯೇಬಲ್ ಇನ್ಸ್ ಟ್ರುಮೆಂಟ್ಸ್ ಆಕ್ಟ್ ವಿಶೇಷ ಕಾಯ್ದೆಯಾಗಿದ್ದು ದೂರುದಾರ ಒಪ್ಪಿಗೆ ನೀಡಿದರೆ ಮಾತ್ರ ರಾಜಿ ಮಡಲು ಸಾಧ್ಯ ಎಂದು ಸುಪ್ರೀಂ ನ್ಯಾಯಪೀಠ ತಿಳಿಸಿದೆ.
ರಾಜ್ ರೆಡ್ಡಿ ಕಲ್ಲೇಮ್ ವರ್ಸಸ್ ಹರ್ಯಾಣ ಸರ್ಕಾರ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ, ಈ ಕೇಸ್ ನಲ್ಲಿ ನ್ಯಾಯಪೀಠ ಫಿರ್ಯಾದಿಯ ಸಮ್ಮತಿ ಕಡ್ಡಾಯ ಎಂದು ಉಲೇಖಿಸಿತ್ತು ಎಂಬುದನ್ನು ನೆನಪಿಸಿದೆ.
ದೂರುದಾರನಿಗೆ ನ್ಯಾಯಯುತ ಪರಿಹಾರ ಪಾವತಿಸಲಾಗಿದೆ ಎಂಬ ಆಧಾರದ ಹೈಕೋರ್ಟ್ ತೀರ್ಪನ್ನು ಒಪ್ಪಲಾಗದು ಎಂದು ಸ್ಪಷ್ಟಪಡಿಸಿದೆ. ವಿಚಾರಣೆ ಬಾಕಿ ಇರುವಾಗಲೇ ಹೈಕೋರ್ಟ್ ಸಿಆರ್ ಪಿಸಿ ಸೆಕ್ಷನ್ 482ರ ಅಡಿ ಪ್ರಕರಣ ರಾಜಿಗೊಳಿಸಿ ರದ್ದುಗೊಳಿಸಿರುವ ಕ್ರಮ ಸಿಂಧುವಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತಿಳಿಸಿದೆ.