ನವದೆಹಲಿ: ಸ್ವಾತಂತ್ರ್ಯ ದೊರೆತು 75 ವರ್ಷಗಳೇ ಕಳೆದರೂ ದೇಶದಲ್ಲಿ ಜಾತಿಪ್ರೇರಿ ಹಿಂಸಾಕೃತ್ಯಗಳು ಇನ್ನೂ ನಿಂತಿಲ್ಲ. ಜಾತಿಪದ್ಧತಿ ನಿರ್ಮೂಲನೆಯಾಗಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಮೇಲು-ಕೀಳು ಹೆಸರಲ್ಲಿ ಹೇಯ ಕೃತ್ಯಗಳು ನಡೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಜಾತಿ ಹೆಸರಲ್ಲಿ ನಡೆಯುವ ಹೇಯಕೃತ್ಯಗಳ ಬಗ್ಗೆ ನಾಗರಿಕ ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಪ್ರಬಲ ವಿರೋಧ ತೋರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
1991 ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ ಮೂವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಂತರ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ್ದು, ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಜಾತಿಯತೆ ಅಳಿದಿಲ್ಲ ಎಂಬುದನ್ನು ಇಂತಹ ಘಟನೆಗಳು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರರಾವ್, ಸಂಜೀವ್ ಖನ್ನಾ, ಬಿ.ಆರ್. ಗವಾಯಿ ಅವರಿದ್ದ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದ್ದು, ಜಾತಿ ಹೆಸರಲ್ಲಿ ನಡೆಯುವ ಇಂತಹ ಘೋರ ಅಪರಾಧಗಳನ್ನು ನಾಗರಿಕ ಸಮಾಜ ಬಲವಾಗಿ ತಿರಸ್ಕರಿಸಬೇಕು ಎಂದು ಹೇಳಿದೆ.
ಜಾತಿ ಹೆಸರಲ್ಲಿ ನಡೆಯುವ ಹಿಂಸಾಚಾರ, ತಾರತಮ್ಯ, ವೈಷಮ್ಯ, ಮರ್ಯಾದ ಹತ್ಯೆಗಳು ಅಕ್ಷಮ್ಯವಾಗಿದೆ. ಇಂತಹ ಪ್ರಕರಣಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತಗಳಿಗೆ ಕೋರ್ಟ್ ನಿರ್ದೇಶನ ನೀಡುತ್ತಲೇ ಇದೆ. ವಿಳಂಬ ತೋರದೆ ಸರ್ಕಾರಗಳು ಆದೇಶ ಪಾಲನೆಗೆ ಮುಂದಾಗಬೇಕು ಎಂದು ಹೇಳಲಾಗಿದೆ.
ಇಂತಹ ಪ್ರಕರಣಗಳಲ್ಲಿ ಸರ್ಕಾರದ ಪಾತ್ರ ಮಹತ್ವದಾಗಿದೆ. ಸಾಕ್ಷಿಗಳಿಗೆ ರಕ್ಷಣೆ ಒದಗಿಸುವುದು ಕೂಡ ಮುಖ್ಯವಾಗಿದೆ. ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಸಿಗದ ಕಾರಣ ಅವರು ಪ್ರತಿಕೂಲ ಹೇಳಿಕೆ ನೀಡಬೇಕಾಗುತ್ತದೆ. ಇದು ಕಟುವಾಸ್ತವ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇನ್ನು ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. 23 ಅಪರಾಧಿಗಳಿಗೆ ಶಿಕ್ಷೆ ನೀಡಲಾಗಿದೆ. ಮೂವರನ್ನು ಖುಲಾಸೆಗೊಳಿಸಲಾಗಿದೆ.