ನವದೆಹಲಿ: ಮೀಸಲಾತಿಯ ಗರಿಷ್ಠ ಪ್ರಮಾಣ ಶೇಕಡ 50 ರಷ್ಟು ಮಿತಿ ಹೆಚ್ಚಳ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ನಿಂದ ರಾಜ್ಯಗಳ ಅಭಿಪ್ರಾಯ ಕೇಳಲಾಗಿದೆ. ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬಹುದೇ ಎಂದು ಅಭಿಪ್ರಾಯ ತಿಳಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ.
ಒಟ್ಟಾರೆ ಗರಿಷ್ಠ ಮೀಸಲಾತಿ ಪ್ರಮಾಣ ಶೇಕಡ 50 ತಲೂ ಹೆಚ್ಚಾಗಿ ಇರಬಾರದು ಎಂದು 1992 ರಲ್ಲಿ ಸುಪ್ರೀಂಕೋರ್ಟನ 9 ಸದಸ್ಯರ ಪೀಠದ ತೀರ್ಪು ಮರುಪರಿಶೀಲನೆ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಮರಾಠ ಮೀಸಲಾತಿ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ಸದಸ್ಯರ ಪೀಠದಲ್ಲಿ ನಡೆದಿದೆ. ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಈ ವಿಚಾರದಲ್ಲಿ ಎಲ್ಲಾ ರಾಜ್ಯಗಳ ಮೇಲೆ ತೀರ್ಪು ಪರಿಣಾಮ ಬೀರುವ ಕಾರಣ ಬೇರೆ ರಾಜ್ಯಗಳ ಅಭಿಪ್ರಾಯವನ್ನು ಕೇಳಲಾಗಿದೆ.
ಮೀಸಲಾತಿ ಪಡೆಯಲು ಅರ್ಹತೆ ಗಳಿಸಲು ನಿರ್ದಿಷ್ಟ ಸಮುದಾಯವನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ ಎಂದು ರಾಜ್ಯ ಸರ್ಕಾರಗಳೇ ಘೋಷಿಸಬಹುದೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ. ಮೀಸಲಾತಿ ಅರ್ಹತೆ ಘೋಷಿಸುವ ಅಧಿಕಾರ ಶಾಸಕರುಗಳಿಗೆ ಇದೆಯೇ ಎಂಬುದರ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಹೇಳಲಾಗಿದ್ದು, ಮಾ. 15 ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.
ಮರಾಠ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ 16 ರಷ್ಟು ಮೀಸಲಾತಿ ನೀಡಲು 2018ರಲ್ಲಿ ಹೊಸ ಕಾಯ್ದೆ ಜಾರಿಗೊಳಿಸಲಾಗಿದೆ. ಬಾಂಬೆ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಆದರೆ, ಶೇಕಡ 16 ರಷ್ಟು ಮೀಸಲಾತಿಯ ಬದಲಿಗೆ ಉದ್ಯೋಗದಲ್ಲಿ ಶೇಕಡ 12, ಶಿಕ್ಷಣದಲ್ಲಿ ಶೇಕಡ 13 ಮೀಸಲಾತಿ ನೀಡಬೇಕೆಂದು ಹೇಳಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಇದರ ವಿಚಾರಣೆಗೆ ಪಂಚ ಸದಸ್ಯ ಸಂವಿಧಾನ ಪೀಠ ರಚಿಸಲಾಗಿದೆ. ತಮಿಳುನಾಡು ಶೇಕಡ 50 ಕ್ಕಿಂತ ಹೆಚ್ಚು ಮೀಸಲಾತಿ ಕಲ್ಪಿಸಿದೆ. ಈಗ ಸುಪ್ರೀಂ ಕೋರ್ಟ್ ಮೀಸಲಾತಿ ಗರಿಷ್ಠ ಪ್ರಮಾಣ ಶೇಕಡ 50 ಕ್ಕಿಂತ ಹೆಚ್ಚಿಸುವ ಬಗ್ಗೆ ರಾಜ್ಯಗಳ ಅಭಿಪ್ರಾಯ ಕೇಳಿದೆ.