![](https://kannadadunia.com/wp-content/uploads/2023/04/b4df867e-32d1-4c4c-a0b5-422f57ddb953.jpg)
ಐಪಿಎಲ್ ಮಾಜಿ ಕಮಿಷನರ್ ಲಲಿತ್ ಮೋದಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ನ್ಯಾಯಾಂಗದ ವಿರುದ್ಧ ಮಾಡಿದ ಟೀಕೆಗಳಿಗಾಗಿ ಬೇಷರತ್ ಕ್ಷಮೆ ಯಾಚಿಸಿದ ನಂತರ ಸುಪ್ರೀಂ ಕೋರ್ಟ್ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸಿ ಟಿ ರವಿಕುಮಾರ್ ಅವರ ಪೀಠವು ಲಲಿತ್ ಮೋದಿ ಸಲ್ಲಿಸಿದ ಅಫಿಡವಿಟ್ ಅನ್ನು ಗಮನಿಸಿತು. ಇದರಲ್ಲಿ ಅವರು ಭವಿಷ್ಯದಲ್ಲಿ “ನ್ಯಾಯಾಲಯಗಳು ಅಥವಾ ಭಾರತೀಯ ನ್ಯಾಯಾಂಗದ ಘನತೆ” ಗೆ ಹೊಂದಿಕೆಯಾಗದ ಯಾವುದನ್ನೂ ಯಾವುದೇ ರೀತಿಯಲ್ಲಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
“ನಾವು ವಿಶಾಲ ಹೃದಯದಿಂದ ಬೇಷರತ್ತಾದ ಕ್ಷಮೆಯನ್ನು ಸ್ವೀಕರಿಸುತ್ತೇವೆ . ಏಕೆಂದರೆ ನ್ಯಾಯಾಲಯವು ಯಾವಾಗಲೂ ಕ್ಷಮೆಯನ್ನು ಹೆಚ್ಚು ವಿಶೇಷವಾಗಿ ನಂಬುತ್ತದೆ . ಕ್ಷಮೆಯನ್ನು ಸ್ವೀಕರಿಸಿ ನಾವು ಪ್ರಸ್ತುತ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸುತ್ತೇವೆ” ಎಂದು ಸುಪ್ರೀಂಕೋರ್ಟ್ ಪೀಠ ಹೇಳಿದೆ.
ಏಪ್ರಿಲ್ 13 ರಂದು, ನ್ಯಾಯಾಂಗದ ವಿರುದ್ಧದ ಹೇಳಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್ ಲಲಿತ್ ಮೋದಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಬೇಷರತ್ ಕ್ಷಮೆ ಯಾಚಿಸುವಂತೆ ಸೂಚಿಸಿತ್ತು.
ಲಲಿತ್ ಮೋದಿ ಕಾನೂನು ಮತ್ತು ಸಂಸ್ಥೆಗಿಂತ ಮೇಲಲ್ಲ ಎಂಬುದನ್ನು ಗಮನಿಸಿದ ಕೋರ್ಟ್, ಅಂತಹ ನಡವಳಿಕೆಯ ಯಾವುದೇ ಪುನರಾವರ್ತನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿತು. ಕ್ಷಮೆ ಯಾಚಿಸುವ ಮೊದಲು ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅವರಿಗೆ ನಿರ್ದೇಶನ ನೀಡಿತ್ತು. ಭಾರತೀಯ ನ್ಯಾಯಾಂಗದ ಪ್ರತಿಷ್ಠೆಯನ್ನು ಹಾಳುಮಾಡುವ ಅಂತಹ ಯಾವುದೇ ಪೋಸ್ಟ್ ಗಳನ್ನು ಭವಿಷ್ಯದಲ್ಲಿ ದೇಶದ ಹೊರಗಡೆಯಿಂದಲೂ ಮಾಡಲಾಗುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿ ಕ್ಷಮೆ ಕೇಳುವಂತೆ ಸೂಚಿಸಿತ್ತು.
ಲಲತ್ ಮೋದಿ ಮಾರ್ಚ್ 30, 2023 ರಂದು ನ್ಯಾಯಾಂಗದ ಪ್ರತಿಷ್ಠೆಯನ್ನು ಕೆಡಿಸುವ ಟ್ವೀಟ್ ಮಾಡಿದ್ದಾರೆ ಮತ್ತು ನ್ಯಾಯಾಧೀಶರ ವಿರುದ್ಧ ವೃಥಾ ಟೀಕೆಗಳನ್ನು ಮಾಡಿದ್ದಾರೆ ಎಂದು ಹಿರಿಯ ವಕೀಲ ಸಿಯು ಸಿಂಗ್ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.