
ಮೈಸೂರು: ಅಕ್ರಮ ಗಣಿಗಾರಿಕೆಯ ವಿರುದ್ಧದ ಸಂಸದೆ ಸುಮಲತಾ ಅಂಬರೀಶ್ ಅವರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಘೋಷಣೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಎಸ್. ಭಾಗದಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಗಣಿಗಾರಿಕೆಯ ವಿರುದ್ಧ ಹೋರಾಟ ಮಾಡಿದವರಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಗಣಿಗಾರಿಕೆಯಿಂದ ಕೆ.ಆರ್.ಎಸ್. ಜಲಾಶಯಕ್ಕೆ ಅಪಾಯವಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಶಾಸಕರು ಇದನ್ನು ಗಂಭೀರವಾಗಿ ಯೋಚಿಸಬೇಕಿದೆ. ಲಕ್ಷಾಂತರ ರೈತರು ಕೆ.ಆರ್.ಎಸ್. ಜಲಾಶಯ ಅವಲಂಬಿಸಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 20 ವರ್ಷದಿಂದ ಈವರೆಗೆ ಜಲಾಶಯಕ್ಕೆ ಅಪಾಯವಿದೆ. ಮಂಡ್ಯ ಜಿಲ್ಲೆಯ ಸಾಮಾನ್ಯ ಜನರಿಗೂ ಇದರ ಬಗ್ಗೆ ಅನುಮಾನವಿದೆ. ಮಂಡ್ಯ ಜಿಲ್ಲೆಯಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧ ಆಗಬೇಕು. ಹೀಗಾಗಿ ಸುಮಲತಾ ಹೋರಾಟಕ್ಕೆ ರೈತಸಂಘದ ಬೆಂಬಲವಿದೆ ಎಂದು ಮೈಸೂರಿನಲ್ಲಿ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಘೋಷಣೆ ಮಾಡಿದ್ದಾರೆ.