ಬೆಂಗಳೂರು: ರಾಜ್ಯದಲ್ಲಿ ಮತ್ತೆರಡು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದೆ. ಬೆಂಬಲ ಬೆಲೆ ಯೋಜನೆ ಅಡಿ ಉದ್ದು, ಸೋಯಾಬೀನ್ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಹೆಸರು, ಸೂರ್ಯಕಾಂತಿ ಜೊತೆಗೆ ಉದ್ದು ಮತ್ತು ಸೋಯಾಬೀನ್ ಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶನ ನೀಡಿದೆ. ರಾಜ್ಯದಲ್ಲಿ 2024 -25ರ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆ ಅಡಿ 19,760 ಮೆಟ್ರಿಕ್ ಟನ್ ಉದ್ದು ಹಾಗೂ 1,03,315 ಮೆಟ್ರಿಕ್ ಟನ್ ಸೋಯಾಬೀನ್ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಉದ್ದಿನ ಕಾಳು 7400 ರೂ., ಸೋಯಾಬೀನ್ ಗೆ 4892 ರೂಪಾಯಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಕಳೆದ ವರ್ಷ 6950 ರೂ. ಇದ್ದ ಉದ್ದಿನಕಾಳಿನ ಬೆಂಬಲ ಬೆಲೆ 450 ರೂ. ಹೆಚ್ಚಳವಾಗಿದೆ. 4600 ರೂ. ಇದ್ದ ಸೋಯಾಬೀನ್ ಬೆಂಬಲ ಬೆಲೆ 292 ರೂಪಾಯಿ ಹೆಚ್ಚಳವಾಗಿದೆ.