ಫುಟ್ಬಾಲ್ ಮೀನು ಎಂದು ಕರೆಯಲ್ಪಡುವ ಅತಿ ಅಪರೂಪದ ಆಳ ಸಮುದ್ರದ ದೈತ್ಯಾಕಾರದ ಜೀವಿಯನ್ನು ಸ್ಯಾನ್ ಡಿಯಾಗೋ ಪ್ರದೇಶದ ಟೊರೆ ಪೈನ್ಸ್‌ನಲ್ಲಿರುವ ಬ್ಲ್ಯಾಕ್ ಬೀಚ್‌ನಲ್ಲಿ ವ್ಯಕ್ತಿಯೊಬ್ಬರು ಗುರುತಿಸಿದ್ದಾರೆ.
ಜೇ ಬೈಲರ್ ಎಂಬುವವರು ನವೆಂಬರ್ 13 ರಂದು ಸಂಜೆ ವೇಳೆ ಸಮುದ್ರ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಭಯಂಕರವಾಗಿ ಕಾಣುವ ಮೀನನ್ನು ಕಂಡಿದ್ದು, ಅದರ ಫೋಟೋ ಕ್ಲಿಕ್ಕಿಸಿದ್ದಾರೆ. ಮೊದಲಿಗೆ ಈ ಜೀವಿಯನ್ನು ಜೆಲ್ಲಿ ಫಿಶ್ ಎಂದು ಭಾವಿಸಿದ್ದಾರೆ. ಆದರೆ, ಹತ್ತಿರ ಬಂದು ನೋಡಿದಾಗ ಅವರು ಹಿಂದೆಂದೂ ನೋಡಿರದ ವಿಚಿತ್ರ ಜೀವಿಯಾಗಿತ್ತು.
ಕಡಲತೀರದಿಂದ ಹೊರಡುವ ಮೊದಲು, ಅವರು ಈ ಜೀವಿಯ ಮೂರು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ನಂತರ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯ ವಿಜ್ಞಾನಿಗಳಿಗೆ ಈ ಮೀನಿನ ಚಿತ್ರಗಳನ್ನು ಕಳುಹಿಸಿದ ನಂತರ, ಅವರಿಗೆ ಇದು ಪೆಸಿಫಿಕ್ ಫುಟ್ಬಾಲ್ ಮೀನು ಎಂದು ತಿಳಿದುಬಂದಿದೆ.
ಫುಟ್ಬಾಲ್ ಮೀನುಗಳು ಸಾಮಾನ್ಯವಾಗಿ 3,000-4,000 ಅಡಿ ಆಳದ ನೀರಿನಲ್ಲಿ ವಾಸಿಸುತ್ತವೆ. ವೈಜ್ಞಾನಿಕವಾಗಿ ಹಿಮಾಂತೊಲೊಫೈಡೇ ಎಂದು ಕರೆಯಲ್ಪಡುವ ಈ ಮೀನು, ಹೆಚ್ಚಾಗಿ ಅಟ್ಲಾಂಟಿಕ್, ಭಾರತೀಯ ಮತ್ತು ಪೆಸಿಫಿಕ್ ಸಾಗರಗಳ ಉಷ್ಣವಲಯದ ಮತ್ತು ಉಪೋಷ್ಣವಲಯದ ನೀರಿನಲ್ಲಿ ಕಂಡುಬರುತ್ತವೆ. ಈ ಮೀನನ್ನು ಮೊದಲು 1837 ರಲ್ಲಿ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕ ಜೋಹಾನ್ ರೆನ್ಹಾರ್ಡ್ ಗುರುತಿಸಿದ್ದರು.
ಈ ವರ್ಷದ ಆರಂಭದಲ್ಲಿ ಕ್ಯಾಲಿಫೋರ್ನಿಯಾ ಬೀಚ್‌ನಲ್ಲಿ ಮತ್ತೊಂದು ಫುಟ್‌ಬಾಲ್ ಮೀನು ದಡಕ್ಕೆ ಕೊಚ್ಚಿಕೊಂಡು ಹೋಗಿತ್ತು. ಇದು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಚೂಪಾದ ಹಲ್ಲುಗಳು ಮತ್ತು ಫುಟ್ಬಾಲ್ ತರಹದ ದೇಹವನ್ನು ಹೊಂದಿತ್ತು. ಲಗುನಾ ಬೀಚ್‌ನಲ್ಲಿರುವ ಕ್ರಿಸ್ಟಲ್ ಕೋವ್ ಸ್ಟೇಟ್ ಪಾರ್ಕ್‌ನ ಸಾಗರ ಸಂರಕ್ಷಿತ ಪ್ರದೇಶದ ತೀರದಲ್ಲಿ ಇದು ಕಂಡುಬಂದಿದೆ.