ಚಳಿಗಾಲ ಕಾಲಿಟ್ಟಾಗಿದೆ. ಚುಮು ಚುಮು ಚಳಿಗೆ ಹೆಚ್ಚಿನವರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಪದೇ ಪದೇ ಕಾಡುವ ಶೀತ ಕೆಮ್ಮಿಗೆ ಒಮ್ಮೆ ಈ ಮನೆ ಮದ್ದನ್ನು ಮಾಡಿ ನೋಡಿ.
ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಾಗ್ರಿ
ಒಂದು ಹದ ಗಾತ್ರದ ಈರುಳ್ಳಿ, ಒಂದು ಟೀ ಚಮಚ ಕಾಳು ಮೆಣಸು, ಕಾಲು ಟೀ ಸ್ಪೂನ್ ಅರಿಸಿನದ ಪುಡಿ, ಬೆಳ್ಳುಳ್ಳಿ ಮೂರು ಎಸಳು, ಚಕ್ಕೆ ಒಂದು ಸಣ್ಣ ತುಂಡು, ಲವಂಗ 3, ಅರ್ಧ ಇಂಚು ಶುಂಠಿ ಸಣ್ಣಗೆ ಹಚ್ಚಿದ್ದು, 10ರಿಂದ 15 ತುಳಸಿ ಎಲೆ, ½ ಟೀ ಸ್ಪೂನ್ ಉಪ್ಪು, 2 ದೊಡ್ಡ ಚಮಚ ಬೆಲ್ಲ ಇವಿಷ್ಟನ್ನು ಒಟ್ಟು ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ ಅದು ಕುದಿ ಬಂದ ಮೇಲೆ ರುಬ್ಬಿಕೊಂಡ ಈ ಮಿಶ್ರಣ ಹಾಕಿ. ಚೆನ್ನಾಗಿ ಕುದಿಸಿ. ತಳ ಹತ್ತದಂತೆ ಆಗಾಗ ಒಂದು ಸೌಟಿನಿಂದ ಕೈಯಾಡಿಸುತ್ತಾ ಇರಿ. ನಂತರ 10 ನಿಮಿಷ ಚೆನ್ನಾಗಿ ಕುದಿದ ನಂತರ ಇಳಿಸಿ ತುಸು ಬಿಸಿ ಇರುವಾಗಲೇ ಕುಡಿಯಿರಿ.
ಟೀ – ಕಾಫಿ ಬದಲು ಒಂದು ಹೊತ್ತು ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳಿಗೆ ಎರಡರಿಂದ ಮೂರು ಚಮಚ ಕುಡಿಸಬಹುದು.