
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಪಕ್ಷ ಬಿಟ್ಟು ಹೋದ ಎಲ್ಲರನ್ನೂ ವಾಪಾಸ್ ಕರೆ ತರುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲು ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರಲಾಗುವುದು. ಹೇಗೆ ರಾಮ ಭಾರತವನ್ನು ಒಂದು ಗೂಡಿಸಿದನೋ ಹಾಗೇ ಬಿಜೆಪಿಯ ವಿಚಾರಧಾರೆಗಳನ್ನು ಒಪ್ಪಿಕೊಂಡಿರುವ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ನಡೆದಿದೆ ಎಂದರು.
ಜಗದೀಶ್ ಶೆಟ್ಟರ್ ಹಿರಿಯ ನಾಯಕರಾಗಿರುವುದರಿಂದ ಕೇಂದ್ರದ ನಾಯಕರು ಅವರೊಂದಿಗೆ ಚರ್ಚಿಸಲಿದ್ದಾರೆ. ಉಳಿದ ನಾಯಕರ ಜೊತೆ ರಾಜ್ಯದ ವರಿಷ್ಠರು ಮಾತನಾಡಲಿದ್ದಾರೆ ಎಂದು ಹೇಳಿದರು.
ಈ ನಡುವೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿಗೆ ವಾಪಾಸ್ ಕರೆ ತರುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ.