ಶಿವಮೊಗ್ಗ: ರಾಜ್ಯದಲ್ಲಿ ನಿರೀಕ್ಷಿತ ಮುಂಗಾರು ಆರಂಭವಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆ ಇದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶರಾವತಿ ನದಿಯ ಜಲಾಶಯಗಳಿಗೆ ಭೇಟಿ ನೀಡಿ. ಪರಿಶೀಲಿಸಿದ್ದೇನೆ. ಸದ್ಯಕ್ಕೆ ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಆಗುವುದಿಲ್ಲ. ಮುಂಗಾರು ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮುಂಗಾರು ನಂತರ ಗ್ರೀನ್ ಎನರ್ಜಿ ಹೈಬ್ರಿಡ್ ಪಾರ್ಕ್ ಗೆ ಚಿಂತನೆ ನಡೆಸಲಾಗಿದೆ. 7 ಜಿಲ್ಲೆಗಳಲ್ಲಿ ಗ್ರೀನ್ ಎನರ್ಜಿ ಹೈಬ್ರಿಡ್ ಪಾರ್ಕ್ ಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಸರ್ವೇ ಕೂಡ ಆಗಿದೆ. ಹೈಬ್ರಿಡ್ ಪಾರ್ಕ್ ನಿಂದ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದರು.
ಉಜ್ವಲ ಯೋಜನೆ ಅವ್ಯವಹಾರ ತನಿಖೆ ನಡೆಯುತ್ತಿದೆ. ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.