ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗತೊಡಗಿದೆ. ಬೇಸಿಗೆಯ ತಾಪಮಾನ ಈ ಬಾರಿ ಹೆಚ್ಚಾಗಲಿದೆ. ನವೆಂಬರ್ ನಲ್ಲಿ ಬಂದ ಮಳೆಗಾಗಿ ಈ ವರ್ಷ ಚಳಿಗಾಲದ ಅವಧಿ ಕಡಿಮೆಯಾಗಿದ್ದು, ವಾಡಿಕೆಗೆ ಮುನ್ನವೇ ಬಿಸಿಲ ಬೇಗೆ ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ಮಾರ್ಚ್ ನಂತರ ಉರಿ ಬಿಸಿಲು ಹೆಚ್ಚಾಗುತ್ತಿತ್ತು. ಈ ಬಾರಿ ಫೆಬ್ರವರಿ 2ನೇ ವಾರದಿಂದಲೇ ಬಿಸಿಲಲ್ಲಿ ಪ್ರಖರತೆ ಜಾಸ್ತಿಯಾಗುತ್ತಿದೆ. ಗರಿಷ್ಠ ತಾಪಮಾನದಲ್ಲಿ ಸರಾಸರಿ 2 -3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಲಿದ್ದು, ಜೂನ್ 15 ರ ವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಬೀದರ್, ವಿಜಯಪುರ, ಕಲಬುರ್ಗಿ, ರಾಯಚೂರು, ಬಳ್ಳಾರಿ ಮೊದಲಾದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ನಷ್ಟು ಇದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ 36 ರಿಂದ 38 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಸರಾಸರಿ 2 -3 ಡಿಗ್ರಿಯಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಬೇಸಿಗೆ ಬಿಸಿಲ ಹೊಡೆತದಿಂದಾಗಿ ಜನರಿಗೆ ತಲೆನೋವು, ವಾಕರಿಕೆ, ನಿರ್ಜಲೀಕರಣ, ಸುಸ್ತು, ವಾಂತಿ, ಬೆವರು, ಕೈಕಾಲು ಊತ ಮೊದಲಾದ ತೊಂದರೆ ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.