ಬೆಂಗಳೂರು: ಗ್ರಾಮೀಣ ಮಕ್ಕಳ ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ನೆರವಾಗುವಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಬೇಸಿಗೆ ರಜೆ ಸಂದರ್ಭದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿದೆ.
ಶಿಬಿರ ಆರಂಭವಾಗಿದ್ದು, ಮೇ 27ರವರೆಗೆ ನಡೆಯಲಿದೆ. ಬೇಸಿಗೆ ಶಿಬಿರದಲ್ಲಿ ಪುಸ್ತಕ, ದಿನ ಪತ್ರಿಕೆ ಓದುವುದು, ಪತ್ರ ಬರೆಯುವುದರ ಬಗ್ಗೆ ತಿಳಿಸಲಾಗುವುದು. ಕಾಮನಬಿಲ್ಲು ಮೂಡಿಸುವಿಕೆ, ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿ ದಾಂಡು, ಗ್ರಾಮದಲ್ಲಿ ಬಳಕೆ ಮಾಡುವ ಅಳತೆ ಮತ್ತು ಮಾಪಕಗಳು, ಪೇಪರ್ ಜೆಟ್, ಕಣ್ಣು ಮಿಟುಕಿಸುವ ಬೊಂಬೆ, ಕೇರಂ, ಚೆಸ್, ಆಕಾಶ ವೀಕ್ಷಣೆ ಮತ್ತಿತರ ಚಟುವಟಿಕೆಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಲಾಗುತ್ತದೆ.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಸರ್ಕಾರಿ ಶಾಲೆ ಅಥವಾ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಾಹಿತಿ ಕೇಂದ್ರಗಳಲ್ಲಿ ಶಿಬಿರ ನಡೆಯಲಿದೆ. ಗ್ರಂಥಪಾಲಕರು ಮತ್ತು ಗುರುತಿಸಿದ ಸ್ವಯಂಸೇವಕರೊಂದಿಗೆ ಬೇಸಿಗೆ ಶಿಬಿರ ನಡೆಸಲಿದ್ದು, ಆಸಕ್ತರು ಭಾಗವಹಿಸಲು ತಮ್ಮ ಪಂಚಾಯಿತಿ ವ್ಯಾಪ್ತಿಯ ಕಚೇರಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.