ಮಂಡ್ಯ : ಮಂಡ್ಯ ಲೋಕಸಭೆಯಿಂದ ನಾನು ಸ್ಪರ್ಧಿಸುತ್ತಿಲ್ಲ, ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಸಂಸದೆ ಸುಮಲತಾ ಘೋಷಣೆ ಮಾಡಿದ್ದಾರೆ.
ಇಂದು ಬೆಂಬಲಿಗರ ಜೊತೆ ಸಭೆ ನಡೆಸಿದ ಸುಮಲತಾ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಮಂಡ್ಯ ಲೋಕಸಭೆಯಿಂದ ನಾನು ಸ್ಪರ್ಧಿಸುತ್ತಿಲ್ಲ, ಹಾಗಂತ ನಾನೂ ಮಂಡ್ಯ ಬಿಟ್ಟು ಎಲ್ಲೂ ಹೋಗುತ್ತಿಲ್ಲ ಎಂದು ಸುಮಲತಾ ಹೇಳಿದರು. ಇದೇ ವೇಳೆ ಸುಮಲತಾ ಅವರ 5 ವರ್ಷದ ಸಾಧನೆಯ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಸುಮಲತಾ ‘ 5 ವರ್ಷಗಳ ಹಿಂದೆ ಐತಿಹಾಸಿಕ ಗೆಲುವನ್ನು ನೀವು ಕೊಟ್ಟಿದ್ರಿ, ಇಂಡಿಯಾ ಅಂದರೆ ಮಂಡ್ಯ, ಮಂಡ್ಯ ಅಂದರೆ ಇಂಡಿಯಾ ಎನ್ನುವ ರೀತಿಯಲ್ಲಿ ಬಿಂಬಿಸಿದ್ರಿ, ನನ್ನ ಯೋಜನೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ ನೀವು ಸಹಾಯ ಮಾಡಿದ್ರಿ..ನಿಮಗೆ ಚಿರರುಣಿ’ ಎಂದರು. ಅಕ್ರಮ ಗಣಿಕಾರಿಕೆ ವಿರುದ್ಧ ದೊಡ್ಡ ಯುದ್ದವನ್ನೇ ಮಾಡಿದ್ದೇನೆ. ಮಂಡ್ಯ ಜಿಲ್ಲಾಡಳಿತ ನನಗೆ ಸಂಪೂರ್ಣ ಸಹಕಾರ ನೀಡಿದೆ. ಮಂಡ್ಯದ ಜನ ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಚಿರರುಣಿ ಎಂದು ಸುಮಲತಾ ಹೇಳಿದರು.
ಕಳೆದ ಬಾರಿ ನನ್ನ ಮನೆ ಮಕ್ಕಳಾದ ನಟ ಯಶ್ ಹಾಗೂ ದರ್ಶನ್ ನನ್ನ ಜೊತೆ ನಿಂತು ನನಗೆ ಬೆಂಬಲ ನೀಡಿದ್ದರು. ಅವರಿಗೆ ಧನ್ಯವಾದ ಹೇಳಿದರೂ ಅವರು ಒಪ್ಪಿಕೊಳ್ಳಲ್ಲ. ಏನೇ ಆದರೂ ನಾವು ನಿಮ್ಮ ಜೊತೆ ಇರ್ತೀವಿ ಎಂದು ಯಶ್ ಹಾಗೂ ದರ್ಶನ್ ನನ್ನ ಜೊತೆ ಇದ್ದರು. ಈ ಮೂಲಕ ಯಶಸ್ಸಿನ ಗೆಲುವು ದಾಖಲಿಸಿದೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ. ನಾನು ಸ್ವಾರ್ಥ ರಾಜಕಾರಣ ಮಾಡಲ್ಲ, ನಾನು ಅಂಬರೀಷ್ ಅವರನ್ನು ನೋಡಿಕೊಂಡು ಬೆಳೆದಿದ್ದೀನಿ. ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ ಎಂದರು.
ಸುಮಲತಾ ಅಂಬರೀಶ್ ಅವರು ಹೆಚ್.ಡಿ. ಕುಮಾರಸ್ವಾಮಿಗೆ ಬೆಂಬಲಿಸುತ್ತಾರೆಯೇ ಅಥವಾ ತಟಸ್ಥ ನಿಲುವು ತಾಳುತ್ತಾರೆಯೇ? ಇಲ್ಲವೇ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆಯೇ ಎನ್ನುವುದು ಭಾರಿ ಕುತೂಹಲ ಮೂಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಮಂಡ್ಯ ನಗರದ ಕಾಳಿಕಾಂಬ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ ಸಭೆ ನಡೆಸಿ ಸುಮಲತಾ ಅಂಬರೀಶ್ ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸಿದ್ದಾರೆ. ಸಭೆಯಲ್ಲಿ ನಟರಾದ ದರ್ಶನ್, ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.