ಬೆಂಗಳೂರು: ತಮ್ಮ ಬಗ್ಗೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗರಂ ಆಗಿದ್ದಾರೆ.
ಚುನಾವಣೆಯಿಂದಲೂ ಇಂತಹ ಮಾತು ಎದುರಿಸುತ್ತಿದ್ದೇನೆ. ಅಂಬರೀಶ್ ಇದ್ದಾಗ ಈ ರೀತಿಯಾಗಿ ಮಾತನಾಡಲು ಯಾರಿಗೂ ಧೈರ್ಯವಿರಲಿಲ್ಲ. ಈಗ ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ನಾನು ನನ್ನ ಕ್ಷೇತ್ರದ ಜನರಿಗೆ ಉತ್ತರದಾಯಿತ್ವವೇ ಹೊರತು ಪಕ್ಕದ ಕ್ಷೇತ್ರದ ಸಂಸದರಿಗೆ ಉತ್ತರದಾಯಿತ್ವವಲ್ಲ. ಪಕ್ಕದ ಕ್ಷೇತ್ರದ ಎಂಪಿಗೆ ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅಂಬರೀಶ್ ಅಭಿಮಾನಿಗಳು, ನನ್ನ ಮತದಾರರಿಂದ ಈಗಾಗಲೇ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಎನ್ನುವುದು ಗೊತ್ತಿದೆ ಎಂದು ಹೇಳಿದ್ದಾರೆ.
ಸಂಸದರಾಗಿ ಮತ್ತೊಬ್ಬ ಸಂಸದರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಸಂಸದರ ಭಾಷೆಯನ್ನು ಅವರು ಬಳಸಿದ್ದರೆ ಪ್ರತಿಕ್ರಿಯೆ ನೀಡುತ್ತಿದ್ದೆ. ಒಬ್ಬ ಪೇಟೆ ರೌಡಿ ತರ ಮಾತಾಡುವುದಾದರೆ ನನ್ನ ರಿಯಾಕ್ಷನ್ ಗೆ ಅವರಿಗೆ ಅರ್ಹತೆ ಇಲ್ಲವೆಂದು ಕಿಡಿಕಾರಿದ್ದಾರೆ.
ಕೊಡಗಿನಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಕೊಡಗಿನ ಜನರು ಸಮಸ್ಯೆಗಳ ಬಗ್ಗೆ ನಮಗೂ ಬಂದು ಹೇಳುತ್ತಾರೆ. ನಾನು ಬರೀ ಮಂಡ್ಯ ಕ್ಷೇತ್ರದ ಸಂಸದೆ ಅಲ್ಲ. ನಾನು ಮೈಸೂರಿನ ಒಂದು ಭಾಗದ ಸಂಸದೆ ಕೂಡ ಆಗಿದ್ದೇನೆ. ಮೈಸೂರು ಜಿಲ್ಲೆಯ ಕೆಆರ್ ನಗರ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸೇರುತ್ತದೆ. ರಾಜಕಾರಣಿ ಹೋದಾಗ ಜನ ಬಂದು ಹೇಳುವುದು ಸಾಮಾನ್ಯ. ಈ ರೀತಿಯ ಮಾತುಗಳು ತುಂಬಾ ಬೇಜವಾಬ್ದಾರಿ. ಎರಡು ಬಾರಿ ಸಂಸದರಾದವರು ಅದನ್ನು ಅರಿತು ನಡೆದುಕೊಳ್ಳಬೇಕು. ಅರಿತು ಮಾತನಾಡಿದರೆ ಅವರಿಗೆ ಒಳ್ಳೆಯದಾಗುತ್ತದೆ ಎಂದು ಸುಮಲತಾ ಹೇಳಿದ್ದಾರೆ.