ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಮನೆ ನಿರ್ಮಾಣದ ಮೂಲಕ ಪುತ್ರ ಅಭಿಷೇಕ್ ಅವರು ರಾಜಕೀಯಕ್ಕೆ ಪ್ರವೇಶ ಮಾಡಲು ಸಿದ್ಧತೆ ನಡೆಸಿದರಾ ಅನ್ನೋ ಚರ್ಚೆ ಇದೀಗ ಶುರುವಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಗೆದ್ದರೆ ಮಂಡ್ಯದಲ್ಲಿ ಮನೆ ನಿರ್ಮಿಸಿ ಅಲ್ಲಿ ವಾಸವಿದ್ದು, ಜನರ ಕಷ್ಟ ಆಲಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಅವರು ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇಂದು ಬೆಳಗ್ಗೆ ತಮ್ಮ ಜಮೀನಿನಲ್ಲಿ ನಡೆದ ಧಾರ್ಮಿಕ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ತಮ್ಮ ಪುತ್ರನ ಜೊತೆ ಸುಮಲತಾ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರ ಪುತ್ರ ಅಭಿಷೇಕ್ ಗೌಡ, ಆಪ್ತರು, ಹಿತೈಷಿಗಳು ಉಪಸ್ಥಿತರಿದ್ದರು.
ಮುಂದಿನ ವಿಧಾನಸಭಾ ಚುನಾವಣೆಯತ್ತ ಸುಮಲತಾ ಕಣ್ಣಿಟ್ಟಿದ್ದಾರೆ ಎಂಬ ಗುಮಾನಿ ರಾಜಕೀಯ ವಲಯದಲ್ಲಿ ಶುರುವಾಗಿದೆ. ಮದ್ದೂರು ಕ್ಷೇತ್ರದಿಂದ ಅಭಿಷೇಕ್ ಅಂಬರೀಷ್ ಅವರನ್ನು ಕಣಕ್ಕಿಸಲು ಸುಮಲತಾ ಯೋಜನೆ ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಸದ್ಯ ಇದು ಮಂಡ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.