ಮೈಸೂರು: ಅನುಮತಿ ಇಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಲೈಸೆನ್ಸ್ ಅವಧಿ ಮುಗಿದರೂ ಕೂಡ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಸರ್ಕಾರಕ್ಕೆ ಬರಬೇಕಿದ್ದ ರಾಜಧನ ಸರಿಯಾಗಿ ಬರುತ್ತಿಲ್ಲ. ಒಂದು ಪರ್ಸೆಂಟ್ ರಾಜಧನವನ್ನು ಕಟ್ಟಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ಸರ್ವೇ ನಡೆಸಲು 5 ರಿಂದ 6 ಲಕ್ಷ ರೂಪಾಯಿ ಕೂಡ ಇಲ್ಲವೆಂದು ಇಲಾಖೆಯವರು ಹೇಳಿದ್ದಾರೆ. 1200 ಕೋಟಿ ರೂಪಾಯಿ ಆದಾಯ ಇರುವಾಗ ಸರ್ವೆ ನಡೆಸಲು ಹಣವಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್. ಡ್ಯಾಮ್ ನಲ್ಲಿ ಬಿರುಕು ಮೂಡಿದೆಯೇ ಎಂದು ನಾನು ಮಂಡ್ಯದ ದಿಶಾ ಸಭೆಯಲ್ಲಿ ಪ್ರಶ್ನೆ ಮಾಡಿದ್ದೆ. ಆದರೆ, ಇದನ್ನೇ ರಾಜಕೀಯವಾಗಿ ಬಳಸಿಕೊಂಡು ಮಾತನಾಡುತ್ತಿದ್ದಾರೆ. ರೈತರು ಮತ್ತು ಸ್ಥಳೀಯರು ಇದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಿಂದ ಅಕ್ರಮ ಗಣಿಗಾರಿಕೆಯ ಬಗ್ಗೆ ಡೈವರ್ಟ್ ಮಾಡಲು ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಸ್ಪೋಟಕಗಳ ಬಳಕೆಯಿಂದ ಕೆ.ಆರ್.ಎಸ್. ಡ್ಯಾಮ್ ಗೆ ಬಿರುಕು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದು ತಪ್ಪಾ? ಸುಮ್ಮನಿರಬೇಕಿತ್ತಾ? ಎಂದು ಸುಮಲತಾ ಅಂಬರೀಶ್. ಪ್ರಶ್ನಿಸಿದ್ದಾರೆ.
ನಾನು ಎಲ್ಲಿಯೂ ಕೂಡ ಕೆ.ಆರ್.ಎಸ್. ನಲ್ಲಿ ಬಿರುಕು ಬಿಟ್ಟಿದೆ ಎಂದು ಹೇಳಿರಲಿಲ್ಲ. ಸಂಸದೆಯಾಗಿ ದಿಶಾ ಸಭೆಯಲ್ಲಿ ನಾನು ಪ್ರಶ್ನಿಸಿದ್ದೆ ಎಂದು ತಿಳಿಸಿದ್ದಾರೆ.