ಉಡುಪಿ: ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚಾಲೇಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ನಡೆಸಿ ಗೆಲುವಿಗೆ ಕಾರಣವಾಗಿದ್ದ ದರ್ಶನ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಭರ್ಜರಿ ಮತಬೇಟೆ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಸಂಸದೆ ಸುಮಲಾ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ದರ್ಶನ್ ಅವರನ್ನು ಬೇರೆ ಪಕ್ಷದ ಪ್ರಚಾರಕ್ಕೆ ಹೋಗು ಅಥವಾ ಹೋಗಬೇಡ ಎಂದು ನಾನು ಹೇಳಿಲ್ಲ. ನಾನು ಚುನಾವಣೆಗೆ ನಿಂತಿದ್ದರೆ ದರ್ಶನ್ ನನ್ನ ಪರ ಪ್ರಚಾರಕ್ಕೆ ಬರುತ್ತಿದ್ದರು. ಬೇರೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಅವರ ನಿರ್ಧಾರ. ರಾಜಕೀಯವಾಗಿ ಬೇರೆಯವರ ಬಗ್ಗೆ ನಾವು ಪ್ರತಿದಿನ ಚರ್ಚೆ ಮಾಡಲ್ಲ ಎಂದು ತಿಳಿಸಿದ್ದಾರೆ.
ಸುಮಲತಾ ಅವರೇ ದರ್ಶನ್ ಅವರನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಕಳುಹಿಸಿದ್ದಾರೆ, ಸುಮಲತಾ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಸುಮಲತಾ, ಇದು ಕೇವಲ ಊಹಾಪೋಹ. ಇದರಲ್ಲಿ ಸೆನ್ಸ್ ಲಾಜಿಕ್ ಎರಡೂ ಇಲ್ಲ. ದರ್ಶನ್ ಗೆ ಬೇರೆ ಪಕ್ಷದ ಪರ ಪ್ರಚಾರ ಮಾಡು, ಮಾಡಬೇಡ ಎಂದು ನಾನು ಹೇಳಿಲ್ಲ. ಪ್ರಚಾರ ಯಾರ ಪರ ಮಾಡಬೇಕು ಎಂಬುದು ಅವರ ಇಚ್ಛೆ. ಹೋಗು ಹೋಗಬೇಡ ಎನ್ನಲು ನಾನು ಯಾರು? ಎಂದರು.
ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು, ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದ್ದರು. ಪಕ್ಷ ಮುಖ್ಯವಲ್ಲ, ನಿಂತಿರುವ ವ್ಯಕ್ತಿ ಮುಖ್ಯ ಎಂದು ಅವರೇ ಹೇಳುತ್ತಾ ಬಂದಿದ್ದಾರೆ ಎಂದು ತಿಳಿಸಿದರು.