
ಮನೆಯಲ್ಲಿ ಪುತ್ರಿಯ ಜನನವಾಯ್ತು ಅಂದರೆ ಸಾಕು ಪೋಷಕರಿಗೆ ಉಳಿತಾಯದ ಚಿಂತೆ ಇನ್ನಷ್ಟು ಹೆಚ್ಚಾಗುತ್ತದೆ. ವಿದ್ಯಾಭ್ಯಾಸ, ಮದುವೆಗೆ ಎಷ್ಟು ಹಣ ಕೂಡಿಟ್ಟರೂ ಸಾಲದು. ಆದರೆ ಇಂತವರು ಸುಕನ್ಯಾ ಸಮೃದ್ಧಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಮೂಲಕ ಹಣವನ್ನ ಉಳಿತಾಯ ಮಾಡಬಹುದಾಗಿದೆ. ನಿಮ್ಮ ಶಕ್ತಿಯಾನುಸಾರ ಹಣವನ್ನ ಕೂಡಿಡಬಹುದಾಗಿದೆ. ಇದು ಸಣ್ಣ ಉಳಿತಾಯ ಯೋಜನೆಗಿಂತ ಹೆಚ್ಚು ಲಾಭವನ್ನ ನೀಡಲಿದೆ.
ಈ ಯೋಜನೆಯ ಮೂಲಕ ದೇಶದ ಯಾವುದೇ ವ್ಯಕ್ತಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಮ್ಮ ಮಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ. ಪುತ್ರಿಗೆ 18 ವರ್ಷ ವಯಸ್ಸಾಗುತ್ತಿದ್ದಂತೆಯೇ ಆಕೆ ಈ ಖಾತೆಯ ಮಾಲೀಕಳಾಗುತ್ತಾಳೆ. ಈ ಖಾತೆಗೆ ಹೂಡಿಕೆಯ ಅವಧಿ 15 ವರ್ಷ ಹಾಗೂ ಮುಕ್ತಾಯದ ಅವಧಿ 21 ವರ್ಷ ಆಗಿದೆ. ಈ ಯೋಜನೆಯ ಮೂಲಕ ಒಂದು ಕುಟುಂಬದಲ್ಲಿ 2 ಖಾತೆಯನ್ನು ತೆರೆಯಬಹುದಾಗಿದೆ. ಅವಳಿ ಇಲ್ಲವೇ ತ್ರಿವಳಿ ಮಕ್ಕಳು ಇರುವ ಸಂದರ್ಭದಲ್ಲಿ ಹೆಚ್ಚಿನ ಖಾತೆಯನ್ನು ತೆರೆಯಲು ಅವಕಾಶವಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಡೆಪಾಸಿಟ್ ನಿಯಮ:
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ನೀವು ಯಾವುದೇ ಸರ್ಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ. ಕೇವಲ 250 ರೂಪಾಯಿ ಠೇವಣಿ ಮೂಲಕ ಈ ಖಾತೆಯನ್ನು ತೆರೆಯಬಹುದು. ಈ 250 ರೂಪಾಯಿ ಠೇವಣಿ ಇಡುವಲ್ಲಿ ಅಸಫಲರಾದಲ್ಲಿ 50 ರೂಪಾಯಿ ದಂಡ ವಿಧಿಸಲಾಗುತ್ತದೆ. ವಾರ್ಷಿಕ ಕನಿಷ್ಟ ಠೇವಣಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗದ ಖಾತೆಯು ನಿಷ್ಕ್ರಿಯವಾಗಲಿದೆ. ಆದರೆ ಈ ಖಾತೆಯನ್ನು ನೀವು ಕೊನೆಯ ಠೇವಣಿ ಅವಧಿ ಮುಗಿಯುವ ಮುನ್ನ ಯಾವುದೇ ಸಮಯದಲ್ಲೂ ಮತ್ತೆ ಸಕ್ರಿಯ ಮಾಡಿಕೊಳ್ಳಬಹುದಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯಲ್ಲಿ ನೀವು ವಾರ್ಷಿಕ 1.5 ಲಕ್ಷ ರೂಪಾಯಿವರೆಗೆ ಠೇವಣಿ ಇಡಬಹುದಾಗಿದೆ. ಈ ಠೇವಣಿ ಮಿತಿಯನ್ನ ಮೀರಿದ ಹಣವನ್ನು ಠೇವಣಿದಾರರಿಗೆ ಹಿಂದಿರುಗಿಸಲಾಗುತ್ತದೆ. ಕೇಂದ್ರ ಸರ್ಕಾರವು 2015ರಿಂದ ಈ ಯೋಜನೆಯನ್ನು ಆರಂಭಿಸಿದೆ. 2016ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿದೆ.
ಸೆಪ್ಟೆಂಬರ್ 2021ರಲ್ಲಿ ಕೊನೆಯಾಗುವ ತ್ರೈಮಾಸಿಕದಲ್ಲಿ ಈ ಖಾತೆಯಲ್ಲಿ ನೀವು ಕೂಡಿಟ್ಟ ಹಣಕ್ಕೆ 7.6 ಪ್ರತಿಶತ ಬಡ್ಡಿ ಸಿಗಲಿದೆ. ಈ ಖಾತೆಯಲ್ಲಿ ಹಣ ಹೂಡಿಕೆ ಹಾಗೂ ಮುಕ್ತಾಯ ಮೊತ್ತದ ಮೇಲೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ನಿಮಗೆ ವಿನಾಯ್ತಿ ಸಿಗಲಿದೆ. ವಾರ್ಷಿಕ 1.5 ಲಕ್ಷ ರೂಪಾಯಿಗಳನ್ನ ಈ ಖಾತೆಯಲ್ಲಿ ಇಡಬಹುದಾಗಿದೆ. ಖಾತೆ ತೆರೆದ ದಿನಾಂಕದಿಂದ ಮುಂದಿನ 14 ವರ್ಷಗಳ ಕಾಲ ಇದರಲ್ಲಿ ನೀವು ಹಣ ಕೂಡಿಡಬಹುದಾಗಿದೆ.
ಅವಧಿಗೂ ಮುನ್ನವೇ ಖಾತೆ ಬಂದ್ ಆದರೆ :
ಖಾತೆಯನ್ನು ತೆರೆದ 5 ವರ್ಷಗಳ ಬಳಿಕ ಬಾಲಕಿಯ ಅನಾರೋಗ್ಯ ಅಥವಾ ಖಾತೆಯಲ್ಲಿ ಠೇವಣಿ ನಿಭಾಯಿಸುತ್ತಿದ್ದವರ ಮರಣವಾದಲ್ಲಿ ಖಾತೆಯನ್ನು ಬಂದ್ ಮಾಡಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಪಿಒ ಉಳಿತಾಯ ಖಾತೆಯ ದರವು ಸಾವಿನ ದಿನಾಂಕದಿಂದ ಕೊನೆಯ ಪಾವತಿ ಮಾಡಿದ ದಿನಾಂಕದವರೆಗೆ ಅನ್ವಯಿಸಲಿದೆ. ಖಾತೆಯನ್ನು ಬಂದ್ ಮಾಡುವ ಮುನ್ನ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಹಣ ವಿತ್ಡ್ರಾ ನಿಯಮ :
ಬಾಲಕಿಗೆ 18 ವರ್ಷ ವಯಸ್ಸಾಗುತ್ತಿದ್ದಂತೆಯೇ ಅಥವಾ 10ನೇ ತರಗತಿ ವ್ಯಾಸಂಗ ಪೂರ್ಣವಾಗುತ್ತಿದ್ದಂತೆ ಈಕೆಗೆ ಖಾತೆಯಲ್ಲಿನ ಹಣ ಡ್ರಾ ಮಾಡುವ ಅಧಿಕಾರ ಸಿಗಲಿದೆ. ಖಾತೆಯಲ್ಲಿರುವ ಹಣದಲ್ಲಿ 50 ಪ್ರತಿಶತ ಹಣವನ್ನು ಮದುವೆ ಹಾಗೂ ವಿದ್ಯಾಭ್ಯಾಸದ ಕಾರಣ ನೀಡಿ ಡ್ರಾ ಮಾಡಬಹುದಾಗಿದೆ.
ಮೆಚ್ಯೂರಿಟಿ ಬಳಿಕ ಸಿಗಲಿದೆ 15 ಲಕ್ಷಕ್ಕೂ ಅಧಿಕ ಮೊತ್ತ :
ಉದಾಹರಣೆಗೆ ನೀವು ಈ ಯೋಜನೆಯಲ್ಲಿ ಪ್ರತಿ ತಿಂಗಳು ಖಾತೆಗೆ 3000 ರೂಪಾಯಿ ಜಮೆ ಮಾಡುತ್ತಿದ್ದರೆ ಅಂದರೆ ವಾರ್ಷಿಕವಾಗಿ 36,000 ರೂಪಾಯಿ ಠೇವಣಿ ಇಡುತ್ತಿದ್ದೀರಾ ಎಂದರ್ಥ. ಈ ರೀತಿ ಮಾಡೋದ್ರಿಂದ 14 ವರ್ಷಗಳ ಬಳಿಕ ನಿಮಗೆ 9,11,574 ರೂಪಾಯಿ ಸಿಗಲಿದೆ. 21 ವರ್ಷಗಳ ಮೆಚ್ಯುರಿಟಿ ಅವಧಿಯ ಬಳಿಕ 15,22,221 ರೂಪಾಯಿ ನಿಮ್ಮ ಕೈ ಸೇರಲಿದೆ.