
ಬೆಂಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಅಳಿಯ ಅತ್ತೆಗೆ ಹೊಡೆದಿದ್ದಾನೆ. ಇದರಿಂದ ಮನನೊಂದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಶಾ(25) ನೇಣಿಗೆ ಶರಣಾದವರು ಎಂದು ಹೇಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಬೈರಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಆಶಾ ಅವರ ಪತಿ ಲಕ್ಷ್ಮಿಪತಿ ಮತ್ತು ತಾಯಿ ಮಂಜುಳಾ ನಡುವೆ ಗಲಾಟೆ ನಡೆದು ಅತ್ತೆ ಮಂಜುಳಾ ಮೇಲೆ ಲಕ್ಷ್ಮಿಪತಿ ಹಲ್ಲೆ ಮಾಡಿದ್ದಾನೆ. ತನ್ನ ತಾಯಿ ಮೇಲೆ ಪತಿ ಹಲ್ಲೆ ನಡೆಸಿದ್ದಾನೆ ಎಂದು ಮನನೊಂದ ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಲಾಟೆಯ ಬಳಿಕ ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಕೆಲಸದಿಂದ ಮನೆಗೆ ವಾಪಸ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.