ಬಾಗಲಕೋಟೆ: ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಾವಿಯಲ್ಲಿ ಬಿದ್ದ ಮೂವರು ಪುಟಾಣಿ ಮಕ್ಕಳು ಸಾವನ್ನಪ್ಪಿದ್ದು, ತಾಯಿಯನ್ನು ರಕ್ಷಣೆ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ಘಟನೆ ನಡೆದಿದೆ. ಬಾವಿಗೆ ಹಾರಿದ್ದ ಪತ್ನಿ ಸಂಗೀತಾಳನ್ನು ಪತಿ ಹನುಮಂತ ರಕ್ಷಣೆ ಮಾಡಿದ್ದಾರೆ. ಮಕ್ಕಳಾದ ಶ್ರೀಶೈಲ್(5), ಶ್ರಾವಣಿ(3), 17 ದಿನದ ಸೌಜನ್ಯಾ ಮೃತಪಟ್ಟಿದ್ದಾರೆ. ಪತ್ನಿಯನ್ನು ರಕ್ಷಿಸಿದ ಹನುಮಂತ ಮಕ್ಕಳ ರಕ್ಷಣೆಗೆ ಎಷ್ಟೇ ಪ್ರಯತ್ನಿಸಿದರೂ ರಕ್ಷಿಸಲು ಸಾಧ್ಯವಾಗಿಲ್ಲ.
ಇಬ್ಬರು ಹೆಣ್ಣು, ಒಂದು ಗಂಡು ಸೇರಿ ಮೂವರು ಮಕ್ಕಳಿಗೆ ಸಂಗೀತಾ ಜನ್ಮ ನೀಡಿದ್ದು, 3ನೇ ಮಗು ಗಂಡಾಗುತ್ತದೆ ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ ಕಳೆದ 17 ದಿನಗಳ ಹಿಂದೆ ಹೆಣ್ಣು ಮಗು ಜನಿಸಿದೆ. ಇದರಿಂದ ನೊಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದಕ್ಕೆ ಸಂಗೀತಾ ವಿರುದ್ಧ ದೂರು ದಾಖಲಾಗಿದೆ. ಜಮಖಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.