ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯ ಪಕ್ಷಿಕೆರೆಯಲ್ಲಿ ಗರ್ಭಿಣಿ ಪತ್ನಿ, ಮಗು ಕೊಂದು ರೈಲಿಗೆ ತಲೆ ಕೊಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿದೆ.
ಮೃತ ಕಾರ್ತಿಕ್ ಭಟ್ ತಾಯಿ ಶಾಮಲಾ ಭಟ್, ಸಹೋದರಿ ಕಣ್ಮಣಿ ಅವರನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕೌಟುಂಬಿಕ ಕಲಹದ ಬಗ್ಗೆ ಕಾರ್ತಿಕ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು. ತಂದೆ, ತಾಯಿ, ಸಹೋದರಿಯ ವಿರುದ್ಧ ಕಾರ್ತಿಕ್ ಭಟ್ ಆರೋಪ ಮಾಡಿದ್ದರು. ಇವರೇ ನಮ್ಮ ಸಂಸಾರ ಹಾಳು ಮಾಡಿದರೆಂದು ಕಾರ್ತಿಕ್ ಉಲ್ಲೇಖಿಸಿದ್ದರು. ಇಂತಹ ಅಪ್ಪ-ಅಮ್ಮ ಯಾರಿಗೂ ಸಿಗಬಾರದೆಂದು ಬರೆದಿದ್ದರು. ಅತ್ತೆ, ಮಾವ ನಮ್ಮ ಶವಸಂಸ್ಕಾರ ಮಾಡಬೇಕೆಂದು ಕಾರ್ತಿಕ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.
ಕಾರ್ತಿಕ್ ತಂದೆ, ತಾಯಿ, ಸೋದರಿ ವಿರುದ್ಧ ಪ್ರಿಯಾಂಕಾ ಪೋಷಕರು ದೂರು ನೀಡಿದ್ದರು. ಕಾರ್ತಿಕ್ ತನ್ನ ಪತ್ನಿ, ಮಗು ಕೊಲೆ ಮಾಡುವುದಕ್ಕೆ ಸಾಧ್ಯವಿಲ್ಲವೆಂದು ಹೇಳಿದ್ದರು. ಪ್ರಿಯಾಂಕಾ ಮತ್ತು ಮಗು ಕೊಲೆಯ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.
ಅತ್ತೆ, ಮಾವನ ಕಿರುಕುಳದಿಂದ ಈ ದುರಂತ ನಡೆದಿದೆ ಎಂದು ದೂರು ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಪ್ರಿಯಾಂಕಾ ಪೋಷಕರು ಮನವಿ ಮಾಡಿದ್ದರು. ಪಕ್ಷಿಕೆರೆ ಗ್ರಾಮದ ಮನೆಯಲ್ಲಿ ಪತ್ನಿ, ಮಗುವನ್ನು ಕೊಂದಿದ್ದ ಕಾರ್ತಿಕ್ ನಂತರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದ.