ಮಂಗಳೂರು: ಮಂಗಳೂರಿನ ಹೆಸರಾಂತ ಮಹೇಶ್ ಬಸ್ ಟ್ರಾವೆಲ್ಸ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಮೋಟರ್ಸ್ ಮಾಲಿಕ ಜಯರಾಮ ಶೇಖ ಅವರ ಪುತ್ರ ಪ್ರಕಾಶ್ ಶೇಖ(43) ಆತ್ಮಹತ್ಯೆ ಮಾಡಿಕೊಂಡವರು.
ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕದ್ರಿ- ಕಂಬಳ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಪ್ರಕಾಶ್ ಭಾನುವಾರ ಮಧ್ಯಾಹ್ನ ಊಟವಾದ ನಂತರ ರೂಂಗೆ ಹೋಗಿದ್ದಾರೆ. ಅವರು ಮಲಗಿರಬಹುದು ಎಂದು ಮನೆಯವರು ಸುಮ್ಮನಾಗಿದ್ದರು. ಸಂಜೆಯಾದರೂ ಕೊಠಡಿಯಿಂದ ಪ್ರಕಾಶ್ ಹೊರಬರದ ಕಾರಣ ಬಾಗಿಲು ಮುರಿದು ನೋಡಿದಾಗ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ತಂದೆ, ತಾಯಿ, ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಆಗಲಿದ್ದಾರೆ. ಸುಮಾರು 60ಕ್ಕೂ ಅಧಿಕ ಬಸ್ ಗಳ ಮಾಲೀಕರಾಗಿದ್ದ ಪ್ರಕಾಶ್ ಶೇಖ ಅವರು ಜಿಲ್ಲಾ ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಕಾಂಕ್ರೀಟ್ ಮಿಕ್ಸಿಂಗ್ ಉದ್ಯಮ ನಡೆಸುತ್ತಿದ್ದರು. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಸಮಾಜಸೇವಕರಾಗಿ, ದಾನಿಯಾಗಿ ಪ್ರಕಾಶ್ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.