ವಿಧಾನಪರಿಷತ್ ಉಪಾಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ನಿಧನಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಧರ್ಮೇಗೌಡರ ಆತ್ಮಹತ್ಯೆ ಸುದ್ದಿ ಆಘಾತ ತಂದಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಸಜ್ಜನ ಸನ್ನಡತೆಯ ಉಪಸಭಾಪತಿಯನ್ನು ಕಳೆದುಕೊಂಡಿದ್ದೇವೆ ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.
ಸಜ್ಜನ ಸನ್ನಡತೆಯ ಉಪಸಭಾಪತಿಗಳನ್ನು ಕಳೆದುಕೊಂಡದ್ದು ನಮ್ಮ ರಾಜ್ಯದ ನಷ್ಟ. ಅವರ ಕುಟುಂಬ ಹಾಗೂ ಬಂಧು ಮಿತ್ರರಿಗೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಉಪ ಸಭಾಪತಿ, ಪಕ್ಷದ ಹಿರಿಯ ಮುಖಂಡರು ಹಾಗೂ ನನ್ನ ಸಹೋದರರಂತೆ ಇದ್ದ ಧರ್ಮೇಗೌಡರ ಆತ್ಮಹತ್ಯೆ ಸುದ್ದಿ ತೀವ್ರ ಆಘಾತವನ್ನುಂಟುಮಾಡಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಧರ್ಮೇಗೌಡರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ಭಗವಂತನ ಕರುಣಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.