ವಿಜಯಪುರ: ಕೇಂದ್ರ ಸರ್ಕಾರ ಸಕ್ಕರೆ ರಫ್ತಿಗೆ ಅನುಮತಿ ನೀಡದ ಕಾರಣ ದೇಶದಲ್ಲಿಯೇ ಸಕ್ಕರೆ ಮಾರಾಟ ಮಾಡಬೇಕಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
ಆಲಮಟ್ಟಿ ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಸಕ್ಕರೆ ರಫ್ತಿಗೆ ಅನುಮತಿ ನೀಡಿದಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ ಇನ್ನೂ 500 ರೂಪಾಯಿ ಹೆಚ್ಚಿನ ದರ ಸಿಗಲಿದೆ ಎಂದು ತಿಳಿಸಿದ್ದಾರೆ.
ಜಗತ್ತಿನಲ್ಲಿಯೇ ಕಬ್ಬಿಗೆ ಅತಿ ಹೆಚ್ಚು ಬೆಲೆ ನೀಡುತ್ತಿರುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಪ್ರತಿ ಟನ್ ಕಬ್ಬಿಗೆ 3400ರೂ. ನೀಡಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಿಳಿಂದ ಎಥೆನಾಲ್ ಅನ್ನು ಲೀಟರ್ ಗೆ 65 ರೂ.ಕೊಟ್ಟು ಖರೀದಿಸುವ ಕೇಂದ್ರ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಅದನ್ನು 95 ರೂಪಾಯಿಗೆ ಮಾರಾಟ ಮಾಡುತ್ತವೆ. ಇದರಿಂದ ಒಂದು ಲೀಟರ್ಗೆ 30 ರೂಪಾಯಿವರೆಗೆ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ಕೇಂದ್ರ ಸರ್ಕಾರದ ಈ ಧೋರಣೆಯನ್ನು ರೈತರು ಖಂಡಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.