ಬೆಂಗಳೂರು: ಇನ್ನು 2 ತಿಂಗಳ ಕಾಲ ಜನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಈ ಬಗ್ಗೆ ಮಾತನಾಡಿದ ಸುಧಾಕರ್, ರಾಜ್ಯದ ಜನರು ಸಹಕಾರ ನೀಡಬೇಕು. ಕೆಮ್ಮು, ನೆಗಡಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ತೋರದೆ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ದೇಶದಲ್ಲಿ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ವೇಗವಾಗಿ ಹರಡುವ ರೂಪಾಂತರಿ ವೈರಸ್ ನಿಂದ ಜನರು ಎಚ್ಚರಿಕೆ ವಹಿಸುವುದು ಒಳ್ಳೆಯದು. ದೇಶದಲ್ಲಿ 700ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆದರೆ, ರಾಜ್ಯದಲ್ಲಿ ಇಂತಹ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದ ಎಲ್ಲ ಜನರು ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಈ ವೈರಸ್ ವೇಗವಾಗಿ ಹರಡುತ್ತದೆ. ಎಚ್ಚರಿಕೆ ವಹಿಸದಿದ್ದರೆ ಹೊಸ ವೈರಸ್ ನಿಂದ ಅಪಾಯವಿದೆ. ನಿಯಮ ಪಾಲಿಸದ ಕಾರಣ ಸೋಂಕು ಹೆಚ್ಚಾಗುತ್ತಿದೆ. 4 ತಿಂಗಳಲ್ಲಿ ನಿನ್ನೆ ಅತ್ಯಧಿಕ ಕೇಸ್ ದಾಖಲಾಗಿದೆ. ಸ್ಟಾರ್ ನಟರು ಫಿಲಂ ಪ್ರಮೋಷನ್ ಗೆ ಕಡಿವಾಣ ಹಾಕಬೇಕು. ಸಿನಿಮಾರಂಗ ಸೇರಿದಂತೆ ಎಲ್ಲರಿಗೂ ಮನವಿ ಮಾಡಲಾಗಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.