ಹಾಸನ: ನಗರ ಪ್ರದೇಶಗಳಲ್ಲಿ ಒಟ್ಟು 100 ʼನಮ್ಮ ಕ್ಲಿನಿಕ್ʼಗಳಿಗೆ ಡಿಸೆಂಬರ್ 14 ರಂದು ಚಾಲನೆ ದೊರೆಯಲಿದೆ. ಹಾಸನ ಜಿಲ್ಲೆಯಲ್ಲಿ 5 ಕ್ಲಿನಿಕ್ಗಳು ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿ ಜನಸಂಖ್ಯೆಗನುಗುಣವಾಗಿ ಆರೋಗ್ಯ ಕೇಂದ್ರಗಳಿಲ್ಲ. ಆದ್ದರಿಂದ 438 ʼನಮ್ಮ ಕ್ಲಿನಿಕ್ʼಗಳನ್ನು ಆರಂಭಿಸಲಾಗುತ್ತಿದೆ. ಡಿಸೆಂಬರ್ 14 ರಂದು ಮುಖ್ಯಮಂತ್ರಿಗಳು ಕ್ಲಿನಿಕ್ ಗಳನ್ನು ಉದ್ಘಾಟಿಸಲಿದ್ದಾರೆ. ಈ ದಿನ 100 ಕ್ಲಿನಿಕ್ ಗಳು ಆರಂಭವಾಗಲಿವೆ. ಹಾಸನ ಜಿಲ್ಲೆಯಲ್ಲಿ 5 ಕ್ಲಿನಿಕ್ಗಳು ಪ್ರಾರಂಭವಾಗಲಿವೆ ಎಂದರು.
ಕೋವಿಡ್ ಬಂದ ಸಂದರ್ಭದಲ್ಲಿ ಸುಮಾರು 72 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇತ್ತು. 70 ಕ್ಕೂ ಅಧಿಕ ಕೇಂದ್ರಗಳಲ್ಲಿ ವೈದ್ಯರ ಹುದ್ದೆ ಭರ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಮಾರ್ಚ್ ವೇಳೆಗೆ ಉದ್ಘಾಟನೆಯಾಗಲಿದೆ. 339 ವೈದ್ಯ ಹುದ್ದೆಗಳ ಪೈಕಿ 269 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕ್ಯಾನ್ಸರ್, ಮಧುಮೇಹ ಮೊದಲಾದ ಅಸಾಂಕ್ರಾಮಿಕ ರೋಗಗಳ ತಪಾಸಣೆ, ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡಲು ಮಾಡಲು ಕ್ರಮ ವಹಿಸಲಾಗಿದೆ. ಹಾಸನದಲ್ಲಿ 60% ತಪಾಸಣೆ ನಡೆದಿದೆ ಎಂದು ತಿಳಿಸಿದರು.
1.10 ಕೋಟಿ ಜನರಿಗೆ ಆಯುಷ್ಮಾನ್ ಸ್ಮಾರ್ಟ್ ಕಾರ್ಡ್, ಉಚಿತ ಕಣ್ಣು ಪರೀಕ್ಷೆ
60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ ಮಾಡಿ ಕನ್ನಡಕ, ಲೆನ್ಸ್ ನೀಡಲು ಕ್ರಮ ವಹಿಸಲಾಗಿದೆ. 330 ಕೋಟಿ ರೂ. ಮೊತ್ತದ ಈ ಯೋಜನೆಯನ್ನು ಮಾರ್ಚ್ ಒಳಗಾಗಿ ಜಾರಿ ಮಾಡಿ ಉಚಿತವಾಗಿ ಈ ಸೌಲಭ್ಯ ಕಲ್ಪಿಸಲಾಗುವುದು. ಆಯುಷ್ಮಾನ್ ಭಾರತ್ ಯೋಜನೆಯಡಿ 1.10 ಕೋಟಿಗೂ ಅಧಿಕ ಜನರಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ಸಿದ್ಧಪಡಿಸಿದ್ದು, ಡಿಸೆಂಬರ್ 9 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿತರಣೆಗೆ ಚಾಲನೆ ನೀಡಲಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 1,000 ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಜನವರಿ ಅಂತ್ಯಕ್ಕೆ ರಾಜ್ಯದ 5 ಕೋಟಿ ಕಾರ್ಡ್ಗಳನ್ನು ನೀಡುವ ಗುರಿ ಇದೆ ಎಂದು ವಿವರಿಸಿದರು.
100 ಪಿಎಚ್ಸಿ ಮೇಲ್ದರ್ಜೆಗೆ
ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಹೋಬಳಿ ಮಟ್ಟದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೂಡ ಮೇಲ್ದರ್ಜೆಗೇರಿಸಿ ಜಿಲ್ಲಾಸ್ಪತ್ರೆಗಳ ಒತ್ತಡ ಕಡಿಮೆ ಮಾಡಲಾಗುವುದು. ರಾಜ್ಯದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆಯನ್ನು ಉತ್ತಮಪಡಿಸಿದ್ದು, ದಿನಕ್ಕೆ 30,000 ಇದ್ದ ಪ್ರಕ್ರಿಯೆಯನ್ನು 60,000 ಕ್ಕೆ ಏರಿಸಲಾಗಿದೆ. 500 ಮಕ್ಕಳಿಗೆ 32 ಕೋಟಿ ರೂ. ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಮಾಡುತ್ತಿದ್ದು, 65 ಮಕ್ಕಳಿಗೆ ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೆಣ್ಣುಮಕ್ಕಳಿಗೆ ಶುಚಿ ಪ್ಯಾಡ್ ನೀಡುವ ಕಾರ್ಯಕ್ರಮ ಈ ವರ್ಷದಿಂದ ಆರಂಭವಾಗಲಿದೆ ಎಂದು ತಿಳಿಸಿದರು.