ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಉತ್ತಮಪಡಿಸಲು ಸರ್ಕಾರ ಮುಂದಾಗಿದೆ. ಆರೋಗ್ಯ ಸೇವೆಗೆ ಹೊಸ ವಿಷನ್ ಗ್ರೂಪ್ ರಚನೆ ಮಾಡಲಾಗಿದ್ದು, ಉಚಿತ, ಕೈಗೆಟಕುವ ದರದಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ.
ಆರು ತಿಂಗಳಲ್ಲಿ ವಿಷನ್ ಗ್ರೂಪ್ ವರದಿ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಯೋಜಿಸಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಪ್ರದೇಶವಾರು ಕಾಯಿಲೆ, ಅನುವಂಶೀಯ ಕಾಯಿಲೆ ಅಧ್ಯಯನ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ, ವರ್ಷಕ್ಕೆ ಒಂದು ಸಲವಾದರೂ 35 ವರ್ಷ ಮೇಲ್ಪಟ್ಟವರಿಗೆ ರಕ್ತಪರೀಕ್ಷೆ, ಮಕ್ಕಳ ಆರೋಗ್ಯ ಕಾಪಾಡಲು ಟೆಲಿಮೆಡಿಸಿನ್ ವ್ಯವಸ್ಥೆ ಕಲ್ಪಿಸಲಾಗುವುದು.
ಅಪಘಾತಕ್ಕೀಡಾದವರ ರಕ್ಷಣೆಗೆ ಪ್ರತಿ 50 ಕಿಲೋಮೀಟರ್ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಟ್ರಾಮಾ ಕೇರ್ ಸೆಂಟರ್ ಆರಂಭಿಸಲಾಗುವುದು. ಆಸ್ಪತ್ರೆಯಲ್ಲಿ ರೋಗಿಗಳ ಡಿಜಿಟಲ್ ದಾಖಲೆ ಸಂಗ್ರಹ ಮತ್ತು ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲಾಗುವುದು.
ರಾಜ್ಯದ ಜನರಿಗೆ ಉಚಿತವಾಗಿ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.