ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೋನಾ ಸ್ಥಿತಿ ಕೈಮೀರಿದೆ. ಬೆಂಗಳೂರಿನಲ್ಲಿ ಬಿಗಿ ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನರಕ ಸ್ಥಿತಿ ಇರುವುದನ್ನು ಒಪ್ಪಿಕೊಂಡಿದ್ದು, ಬೆಂಗಳೂರು ನಗರದಲ್ಲಿ ವಿಶೇಷ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದೇ ಹೋದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ನಾಳೆಯ ಸಭೆಯಲ್ಲಿ ಚರ್ಚೆ ಮಾಡಿ ಕಠಿಣ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಐಸಿಯು ಬೆಡ್ ಗಳ ಸಮಸ್ಯೆ ಇದೆ. ಐಸಿಯು ಬೆಡ್ ಗಳ ಸಮಸ್ಯೆ ಇಲ್ಲವೆಂದು ನಾನು ಹೇಳಲ್ಲ. ಜೋನಲ್ ನೋಡಲ್ ಅಧಿಕಾರಿ ನೇಮಕ ಮಾಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ನ್ಯೂನತೆಗಳಿದ್ದು ಅವುಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರೊಂದಿಗೆ ಮಾತನಾಡಿದ್ದೇನೆ. ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಕೊರೋನಾ ಸಭೆ, ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.
ತಜ್ಞರು ನೀಡಿದ ವರದಿಯ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಸಲಹೆ ಪಡೆಯುತ್ತೇನೆ. ರಾಜ್ಯಪಾಲರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದು, ಎಲ್ಲ ಮಾಹಿತಿ ನೀಡಿ ಸಿಎಂ ಸಲಹೆ ಪಡೆಯಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.
ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಖಾಸಗಿಯವರು ಹಣ ಪಾವತಿ ಮಾಡದಿರುವುದರಿಂದ ಅವರಿಗೆ ಕೊರತೆ ಆಗಿರಬಹುದು. ನಾನು ಅಸೋಸಿಯೇಷನ್ ಜೊತೆ ಮಾತನಾಡಿದ್ದೇನೆ. 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಶಕ್ತಿ ನಮ್ಮಲ್ಲಿದೆ. 300 ಮೆಟ್ರಿಕ್ ಟನ್ ಆಕ್ಸಿಜನ್ ಕೇಂದ್ರದಿಂದ ಅಲಾಟ್ ಆಗಿದೆ ಎಂದು ಸುಧಾಕರ್ ಹೇಳಿದ್ದಾರೆ.