
ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಅವರು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ತಮ್ಮ ಪತಿ ಎನ್.ಆರ್. ನಾರಾಯಣ ಮೂರ್ತಿ ಅವರೊಂದಿಗಿನ ಸಂಬಂಧವನ್ನು ವಿವರಿಸುತ್ತಾ ತಮ್ಮ ಪತಿ ಇದುವರೆಗೂ ನಗು ವ್ಯಕ್ತಪಡಿಸಿಲ್ಲ ಎಂದಿದ್ದಾರೆ.
ಇತ್ತೀಚೆಗೆ ʼದಿ ಕಪಿಲ್ ಶರ್ಮಾʼ ಶೋನಲ್ಲಿ ನಟಿ ರವೀನಾ ಟಂಡನ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಅವರೊಂದಿಗೆ ಕಾಣಿಸಿಕೊಂಡಿದ್ದ ಸುಧಾಮೂರ್ತಿ, ಈಗಲೂ ನಾರಾಯಣ ಮೂರ್ತಿಯವರ ತೂಕ ನಮ್ಮ ಮದುವೆಯ ದಿನದಿಂದ ಬದಲಾಗದೆ ಉಳಿದಿದೆ. ನಾನು ಕೆಟ್ಟ ಅಡುಗೆಯವಳಾಗಿರುವುದರಿಂದ ನನ್ನ ಪತಿ ತಮ್ಮ ತೂಕವನ್ನು ಕಾಯ್ದುಕೊಂಡಿದ್ದಾರೆ ಎಂದು ಹೇಳಿದಾಗ ನೆರೆದಿದ್ದ ಜನ ಗೊಳ್ಳನೆ ನಕ್ಕರು.
ನಾನು ಮತ್ತು ನಾರಾಯಣ ಮೂರ್ತಿ ಬೇರೆ ಬೇರೆ ವ್ಯಕ್ತಿತ್ವ ಉಳ್ಳವರು. ಅವರು ಎಂದಿಗೂ ನಗುವುದಿಲ್ಲ. ಅವರು ತುಂಬಾ ಗಂಭೀರ ಮತ್ತು ಅಂತರ್ಮುಖಿ. ಅವರು ಹೆಚ್ಚು ಮಾತನಾಡುವುದಿಲ್ಲ. ಅವರು ದಿನಕ್ಕೆ ನಾಲ್ಕೈದು ವಾಕ್ಯಗಳನ್ನು ಮಾತ್ರ ಮಾತನಾಡುತ್ತಾರೆ. ‘ನಾರಾಯಣ ಮೂರ್ತಿ ನೀವು ಯಾಕೆ ಹೆಚ್ಚು ಮಾತನಾಡಬಾರದು?’ ಎಂದು ನಾನು ಅವರನ್ನು ಕೇಳಿದರೆ, ‘ನೀನು ನಮ್ಮಿಬ್ಬರ ಪರವಾಗಿ ಮಾತನಾಡುತ್ತೀರಿ, ಹಾಗಾಗಿ ನನಗೆ ಹೇಳಲು ಏನೂ ಉಳಿದಿಲ್ಲ’ ಎಂದು ಹೇಳುತ್ತಾರೆ. ಒಮ್ಮೆ ಅವರಿಗೆ ವರ್ಷದ ಉದ್ಯಮಿ ಪ್ರಶಸ್ತಿಯನ್ನು ನೀಡಲಾಯಿತು. ಹಾಗಾಗಿ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಲು ಫೋಟೋಗ್ರಾಫರ್ ನಮ್ಮ ಬಳಿಗೆ ಬಂದರು. ನಾರಾಯಣ ಮೂರ್ತಿ ಅವರು ನಗುವುದಿಲ್ಲವಾದ್ದರಿಂದ, ಛಾಯಾಗ್ರಾಹಕರು ಅವರನ್ನು ನಗುವಂತೆ ಮಾಡಬಹುದೇ ಎಂದು ಕೇಳಿದರು. ನಾವು ಮದುವೆಯಾಗಿ 45 ವರ್ಷಗಳು ಕಳೆದಿವೆ. ನಾನು ಇನ್ನೂ ಯಶಸ್ವಿಯಾಗದ ಒಂದು ಕಾರ್ಯವೆಂದರೆ ಅವರನ್ನು ನಗಿಸುವುದು ಎಂದು ಫೋಟೋಗ್ರಾಫರ್ ಗೆ ಹೇಳಿದ್ದಾಗಿ ಸುಧಾಮೂರ್ತಿ ತಿಳಿಸಿದ್ದಾರೆ.
“ಅವರು ಯಾವಾಗಲೂ ಗಂಭೀರವಾಗಿರುತ್ತಾರೆ ಮತ್ತು ನಾನು ಯಾವಾಗಲೂ ನಗುತ್ತಿರುತ್ತೇನೆ. ನಾನು ಸಾರ್ವಕಾಲಿಕ ನಗುವುದನ್ನು ಇಷ್ಟಪಡುತ್ತೇನೆ. ನನಗೆ ಗಂಭೀರತೆಯೇ ಇಷ್ಟವಿಲ್ಲ. ನಮ್ಮ ಸಂಬಂಧವು ಭೌತಶಾಸ್ತ್ರದ ತತ್ವದಂತೆ: ವಿರುದ್ಧ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ ”ಎಂದು ಸುಧಾಮೂರ್ತಿ ಹೇಳಿದರು.