ನವದೆಹಲಿ: ಹೊಸ ಪಠ್ಯಪುಸ್ತಕಗಳ ಪರಿಷ್ಕರಣೆ, ರಚನೆಗೆ ಎನ್‌ಸಿಇಆರ್‌ಟಿಯ 19 ಸದಸ್ಯರ ಸಮಿತಿಗೆ ಸುಧಾ ಮೂರ್ತಿ, ಶಂಕರ್ ಮಹಾದೇವನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ, ಸಂಗೀತ ಮಾಂತ್ರಿಕ ಶಂಕರ್ ಮಹಾದೇವನ್, ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಮತ್ತು ಇತರ 16 ಮಂದಿ ಎನ್‌ಸಿಇಆರ್‌ಟಿ ಹೊಸ ಪಠ್ಯಕ್ರಮದ ಪ್ರಕಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ರಚಿಸಿರುವ ಹೊಸ ಸಮಿತಿಯ ಭಾಗವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ(NSTC) ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ(NIEPA) ಕುಲಪತಿ MC ಪಂತ್ ನೇತೃತ್ವ ವಹಿಸುತ್ತದೆ ಮತ್ತು 3 ರಿಂದ 12 ನೇ ತರಗತಿಗಳಿಗೆ ಪಠ್ಯಪುಸ್ತಕಗಳನ್ನು ರಚಿಸಲಿದೆ.
ಪಠ್ಯಪುಸ್ತಕಗಳು ಮತ್ತು ಇತರ ಬೋಧನಾ ಕಲಿಕಾ ಸಾಮಗ್ರಿಗಳನ್ನು ಸಮಿತಿ ಸಿದ್ಧಪಡಿಸಲಿದೆ. ಇವುಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ) ಉಲ್ಲೇಖಿಸಿ ನಿಯಮಗಳ ಪ್ರಕಾರ ಪ್ರಕಟಿಸಿ ಬಳಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) 2020 ರ ಅನುಷ್ಠಾನದ ಭಾಗವಾಗಿ ಕೆ. ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನೊಂದಿಗೆ(ಎನ್‌ಸಿಎಫ್-ಎಸ್‌ಇ) ಪಠ್ಯಕ್ರಮವನ್ನು ಜೋಡಿಸಲು ಸಮಿತಿಯು ಕೆಲಸ ಮಾಡುತ್ತದೆ.
ಅಂತಿಮ NCF-SE ಅನ್ನು ಈಗಾಗಲೇ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಸಾರ್ವಜನಿಕ ಡೊಮೇನ್‌ನಲ್ಲಿ ಇನ್ನೂ ಬಿಡುಗಡೆಯಾಗಬೇಕಿದೆ. ಚೌಕಟ್ಟಿನ ಕರಡು ಏಪ್ರಿಲ್‌ನಲ್ಲಿ ಬಿಡುಗಡೆಯಾಯಿತು.
ಪ್ರಿನ್ಸ್ ಟನ್ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮಂಜುಲ್ ಭಾರ್ಗವ್ ಅವರು ಸಮಿತಿಯ ಸಹ-ಅಧ್ಯಕ್ಷರಾಗಿದ್ದಾರೆ.
ಗಣಿತಶಾಸ್ತ್ರಜ್ಞೆ ಸುಜಾತಾ ರಾಮದೊರೈ, ಬ್ಯಾಡ್ಮಿಂಟನ್ ಆಟಗಾರ್ತಿ ಯು. ವಿಮಲ್ ಕುಮಾರ್, ನೀತಿ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂಡಿ ಶ್ರೀನಿವಾಸ್ ಮತ್ತು ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚಾಮು ಕೃಷ್ಣ ಶಾಸ್ತ್ರಿ ಇದರ ಇತರ ಸದಸ್ಯರು.
ಮೇ ತಿಂಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಂದ ಹಲವಾರು ವಿಷಯಗಳು ಮತ್ತು ಭಾಗಗಳನ್ನು ಕೈಬಿಡುವುದು ವಿವಾದವನ್ನು ಹುಟ್ಟುಹಾಕಿತು. ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರವನ್ನು ದೂಷಿಸಿದವು.