
ಬ್ರಿಟನ್ ಪ್ರಧಾನಿಯಾಗಿ ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾ ಮೂರ್ತಿ ದಂಪತಿಯ ಅಳಿಯ ರಿಷಿ ಸುನಾಕ್ ಆಯ್ಕೆಯಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಬ್ರಿಟನ್ ಗೆ ರಿಷಿ ಉತ್ತಮ ಆಡಳಿತ ನೀಡಲಿ ಎಂದು ದಂಪತಿ ಹಾರೈಸಿದ್ದರು.
ಇದರ ಮಧ್ಯೆ ರಿಷಿ ಸುನಾಕ್ ಅವರ ಯಶಸ್ಸಿಗೆ ಪ್ರಾರ್ಥಿಸಿ ಸುಧಾ ಮೂರ್ತಿಯವರು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ದುರ್ಗಾದೇವಿ ಮಂದಿರಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಅವರು ಪ್ರಖರ ಹಿಂದುತ್ವವಾದಿ ಸಾಂಬಾಜಿ ಭಿಡೆ ಪಾದಕ್ಕೆ ನಮಸ್ಕರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿವಾದ ಹುಟ್ಟಿಕೊಂಡಿತ್ತು.
ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಸಾಂಭಾಜಿ ಭಿಡೆ ಆರೋಪಿಯಾಗಿದ್ದು, ಇಂಥವರ ಕಾಲಿಗೆ ನಮಸ್ಕರಿಸಿದ್ದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದರು.
ಈ ಕುರಿತಂತೆ ಮಾತನಾಡಿರುವ ಸುಧಾ ಮೂರ್ತಿ, ಸಾಂಭಾಜಿ ಭಿಡೆ ಯಾರೆಂಬುದೇ ನನಗೆ ಗೊತ್ತಿರಲಿಲ್ಲ. ಹಿರಿಯರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ ಎಂದು ಸ್ಪಷ್ಟಪಡಿಸಿದ್ದಾರೆ.