16 ವರ್ಷದ ವಿದ್ಯಾರ್ಥಿನಿ ಶಾಲೆಯಲ್ಲಿದ್ದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದಿದೆ. ಮೇ 10ರ ಶುಕ್ರವಾರ ಬೆಳಗ್ಗೆ 11ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
ಮೃತರನ್ನು ವೆಲ್ಲಿಂಗ್ಟನ್ ಪ್ರದೇಶದ 16 ವರ್ಷದ ಸುತ್ರೋಯ್ ಘೋಷ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಗೆ ಬಾಲ್ಯದಲ್ಲೇ ಹೃದಯ ಕಾಯಿಲೆ ಸಮಸ್ಯೆ ಇತ್ತು. ಅವಳು ಕೇವಲ ಎರಡು ವರ್ಷದವಳಿದ್ದಾಗ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಒಂದು ವರ್ಷದ ಹಿಂದೆ ಸ್ಟೆಂಟ್ ಅನ್ನು ಮರುಅಳವಡಿಕೆ ಮಾಡಲಾಗಿತ್ತು.
ಎಂದಿನಂತೆ ಆಕೆ ಬೆಳಗಿನ ಉಪಾಹಾರವನ್ನು ಸೇವಿಸಿ ತಂದೆ ಜೊತೆ ಶಾಲೆಗೆ ಬಂದಿದ್ದಳು. ಬೇಸಿಗೆ ರಜೆಯ ಆರಂಭಕ್ಕೂ ಮುನ್ನ ಶಾಲೆಯ ಕೊನೆಯ ದಿನವಾದ ಅಂದು ತನ್ನ ಸಹಪಾಠಿಗಳೊಂದಿಗೆ ಮಾತನಾಡುತ್ತಿದ್ದಳು. ಈ ವೇಳೆ ಆಕೆಗೆ ಹೃದಯಾಘಾತವಾಗಿದ್ದು ಬಿಎಂ ಬಿರ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.
ಬೌಬಜಾರ್ ಪೊಲೀಸ್ ಠಾಣೆ ಅಧಿಕಾರಿಯ ಪ್ರಕಾರ, ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮೃತ ಸುತ್ರೋಯ್ ವೈದ್ಯೆಯಾಗಬೇಕೆಂಬ ಹಂಬಲದಿಂದ ನೀಟ್ ಪರೀಕ್ಷೆಗೆ ತಯಾರಿ ಆರಂಭಿಸಿದ್ದಳು ಎಂದು ವರದಿಯಾಗಿದೆ.