ಸೂಡಾನ್ ರಾಜಧಾನಿ ಖಾರ್ಟೌಮ್‌ನಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಮುಂದುವರೆದಿದ್ದು, ಭಾರತೀಯ ರಾಯಭಾರ ಕಚೇರಿಯು ಭಾರತೀಯರು ತಮ್ಮ ನಿವಾಸಗಳಿಂದ ಹೊರಬರದಂತೆ ಸಲಹೆಯನ್ನು ನೀಡಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡುವ ನಿರೀಕ್ಷೆಯಿದ್ದು ಪಡಿತರ ಸಂಗ್ರಹಿಸಿಟ್ಟುಕೊಳ್ಳುವಂತೆ ತಿಳಿಸಲಾಗಿದೆ.
ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಯಭಾರ ಕಚೇರಿ “ಸೂಡಾನ್ ನಲ್ಲಿ ಲೂಟಿ ಮಾಡುತ್ತಿರುವ ಅನೇಕ ಪ್ರಸಂಗಗಳನ್ನು ಗಮನಿಸಿದ್ದೇವೆ.
ಎಲ್ಲಾ ಭಾರತೀಯ ಪ್ರಜೆಗಳು ದಯವಿಟ್ಟು ಹೊರಗೆ ಹೋಗದಂತೆ ಸೂಚಿಸಲಾಗಿದೆ. ದಯವಿಟ್ಟು ನಿಮ್ಮ ರೇಷನ್ ಸಂಗ್ರಹಿಸಿಟ್ಟುಕೊಳ್ಳಿ. ಪರಿಸ್ಥಿತಿಯು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯಬಹುದು. ದಯವಿಟ್ಟು ಪ್ರಯತ್ನಿಸಿ ನಿಮ್ಮ ನೆರೆಹೊರೆಯವರ ಸಹಾಯವನ್ನು ತೆಗೆದುಕೊಳ್ಳಿ. ದಯವಿಟ್ಟು ಮನೆಯಲ್ಲಿಯೇ ಇರಿ ಮತ್ತು ಸುರಕ್ಷಿತವಾಗಿರಿ.” ಎಂದಿದೆ.
ಏತನ್ಮಧ್ಯೆ, ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗದ 31 ಜನರನ್ನು ವಾಪಸ್ ಕರೆತರಲು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಮಂಗಳವಾರ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, “ಕರ್ನಾಟಕದ 31 ಜನರ ಗುಂಪು ಸುಡಾನ್‌ನಲ್ಲಿ ಸಿಲುಕಿರುವ ಸಂದೇಶ ನಮಗೆ ಬಂದಿದೆ. ನಾವು ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದ್ದೇವೆ. ಸದ್ಯಕ್ಕೆ ಯುದ್ಧ ನೆಲದಲ್ಲಿ ಸಿಲುಕಿರುವ ಜನರು ಎಲ್ಲಿದ್ದರೂ ಅಲ್ಲೇ ಉಳಿಯಬೇಕು ಮತ್ತು ಹೊರಗೆ ಹೋಗಬಾರದು. ಭಾರತೀಯ ರಾಜಭಾರ ಕಚೇರಿ ಈ ಬಗ್ಗೆ ಕಾರ್ಯನಿರ್ವಹಿಸುತ್ತಿದೆ, ”ಎಂದು ರಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಡಾನ್‌ನಲ್ಲಿ ವಾಸಿಸುವ ಭಾರತೀಯರ ಸಂಖ್ಯೆ ಸುಮಾರು 4,000 ರಷ್ಟಿದೆ, ಅವರಲ್ಲಿ 1,200 ಮಂದಿ ದಶಕಗಳ ಹಿಂದೆಯೇ ಸೂಡಾನ್ ದೇಶದಲ್ಲಿ ನೆಲೆಸಿದ್ದಾರೆ.
ಪ್ರಜಾಪ್ರಭುತ್ವ ಸರ್ಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸೇನೆ ಮತ್ತು ಅರೆ ಸೇನಾ ಪಡೆಗಳ ನಡುವೆ ಭೀಕರ ಕದನ ನಡೆಯುತ್ತಿದೆ.
ಜನನಿಬಿಡ ಪ್ರದೇಶಗಳಲ್ಲಿ ಪಡೆಗಳು ಟ್ಯಾಂಕ್‌ಗಳು, ಫಿರಂಗಿಗಳು ಮತ್ತು ಇತರ ಭಾರೀ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ, ಇದರಿಂದಾಗಿ ಲಕ್ಷಾಂತರ ಜನರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ.
ಉಭಯ ಪಕ್ಷಗಳ ನಡುವಿನ ಕದನದಲ್ಲಿ ಇದುವರೆಗೆ ಕನಿಷ್ಠ 185 ಜನರು ಸಾವನ್ನಪ್ಪಿದ್ದಾರೆ ಮತ್ತು 1,800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.